ಮುಲ್ಕಿ: ಅತಿಕಾರಿಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಉಡುಪಿ ಜಿಲ್ಲೆಯ ಗಡಿಭಾಗದ ಕಾಪು ವಿಧಾನಸಭಾ ಕ್ಷೇತ್ರದ ಕೊಕ್ರಾಣಿ- ಮಟ್ಟು ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು ಅವ್ಯವಸ್ಥೆಗಳ ಆಗರವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅತಿಕಾರಿಬೆಟ್ಟು ಗ್ರಾಮಪಂಚಾಯತ್ ವ್ಯಾಪ್ತಿಯ ಮುಲ್ಕಿ ಸಹಿತ ಅನೇಕ ಊರುಗಳಿಗೆ ಸಂಪರ್ಕ ಕಲ್ಪಿಸುವ ಮಟ್ಟು ಪ್ರದೇಶದ ಸುಮಾರು ಎರಡು ಕಿಲೋಮೀಟರ್ ಉದ್ದದ ಕೊಕ್ರಾಣಿ ರಸ್ತೆ ಉಡುಪಿ ಜಿಲ್ಲೆಯ ಗಡಿ ಭಾಗಕ್ಕೆ ಹೊಂದಿಕೊಂಡು ಇದ್ದು ಕಳೆದ ಬೇಸಗೆಯಲ್ಲಿ ಎಗ್ಗಿಲ್ಲದೆ ಭಾರವಾದ ಲಾರಿಗಳು ಸಂಚರಿಸಿ ತೀವ್ರ ಹದಗೆಟ್ಟಿದೆ.
ಈ ನಡುವೆ ತೌಕ್ತೆ ಚಂಡಮಾರುತದ ಬಳಿಕ ಎಗ್ಗಿಲ್ಲದೆ ರಸ್ತೆಯಲ್ಲಿ ಶಾಂಭವಿ ನದಿ ತೀರದಿಂದ ಮರಳು ಸಾಗಾಟ ನಡೆದಿದ್ದು ಮತ್ತಷ್ಟು ಹದಗೆಡಲು ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗಡಿಭಾಗದ ರಸ್ತೆ ಅವ್ಯವಸ್ಥೆ ಯಿಂದ ಮಟ್ಟು ಭಾಗದ ಗ್ರಾಮಸ್ಥರು ಹೈರಾಣಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಅನ್ಯ ರಾಜ್ಯಗಳಿಂದ ಮಟ್ಟು ಕಡೆಗೆ ಬರುವ ಪ್ರಯಾಣಿಕರು ಗಡಿಭಾಗದ ಉಡುಪಿ ಜಿಲ್ಲೆಯಕೊಕ್ರಾಣಿ ರಸ್ತೆಯನ್ನು ಬಳಸಿಕೊಂಡು ಬರಬೇಕಾದ ಪರಿಸ್ಥಿತಿ ಇದ್ದು ಬೃಹದಾಕಾರದ ಹೊಂಡಗಳಿಂದ ವಾಹನ ಸವಾರರು ಕಂಗೆಟ್ಟು ಹೋಗಿದ್ದಾರೆ.
ಕೊರೊನಾ ಸಂಕಷ್ಟದ ದಿನಗಳಲ್ಲಿ ರಸ್ತೆ ಅವ್ಯವಸ್ಥೆ ಯಿಂದ ರಿಕ್ಷಾ ಚಾಲಕರು ಸಹಿತ ವಾಹನ ಸವಾರರು ಮಟ್ಟು ಗ್ರಾಮದ ರಸ್ತೆಗೆ ಬರಲು ನಿರಾಕರಿಸುತ್ತಿದ್ದು ಪ್ರಯಾಣಿಕರಿಗೆ ಸಂಕಷ್ಟ ಎದುರಾಗಿದೆ.
ರಸ್ತೆ ಅವ್ಯವಸ್ಥೆ ಬಗ್ಗೆ ಕಾಪು ಕ್ಷೇತ್ರದ ಶಾಸಕ ಲಾಲಾಜಿ ಮೆಂಡನ್ ಹಾಗೂ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಗಮನಕ್ಕೆ ತರಲಾಗಿದ್ದು ಶೀಘ್ರ ದುರಸ್ತಿಯ ಭರವಸೆ ನೀಡಿದ್ದಾರೆ ಎಂದು ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್ ಹೇಳಿದ್ದಾರೆ.
Kshetra Samachara
14/08/2021 01:33 pm