ಮುಲ್ಕಿ:ಮುಲ್ಕಿ ಅಭಿವೃದ್ಧಿ ನಾಗರೀಕ ಸಮಿತಿಯ ಸಭೆ ಶ್ರೀ ಬಪ್ಪನಾಡು ದುರ್ಗಾ ಪರಾಮೇಶ್ವರಿ ದೇವಸ್ಥಾನದ ಅನ್ನಪೂರ್ಣೇಶ್ವರಿ ಸಭಾಂಗಣದಲ್ಲಿ ನಡೆಯಿತು.ಸಭೆಯಲ್ಲಿ ಹೆಜಮಾಡಿ ಟೋಲ್ ಗೇಟ್ ನವರು ಅಕ್ರಮವಾಗಿ ಮುಲ್ಕಿ ಪರಿಸರದ ಜನರಿಂದ ಟೋಲ್ ವಸೂಲಿ ಮಾಡುವ ಬಗ್ಗೆ,ಸುರತ್ಕಲ್ ಟೋಲ್ ನಿಲುಗಡೆ ಬಗ್ಗೆ ತೀವ್ರ ಹೋರಾಟ ಮುಂದುವರಿಸುವ ಬಗ್ಗೆ, ಮುಲ್ಕಿ ಅಭಿವೃದ್ಧಿಯ ವಿಷಯದ ಬಗ್ಗೆ ತೀವ್ರ ಚರ್ಚೆ ನಡೆಯಿತು.
ಮುಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ಅಧ್ಯಕ್ಷರಾದ ಹರೀಶ್ ಪುತ್ರನ್ ಮಾತನಾಡಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶವಾದ ಮುಲ್ಕಿಯಿಂದ ಹೆಜಮಾಡಿ ಟೋಲ್ ಗೇಟ್ ಕೇವಲ ಅರ್ಧ ಕಿಲೋ ಮೀಟರ್ ದೂರದಲ್ಲಿದ್ದು ಮುಲ್ಕಿ ನಾಗರೀಕರಿಗೆ ವಾಹನ ಸುಂಕ ವಸೂಲಿ ಖಂಡನೀಯ. ಈ ಬಗ್ಗೆ ಅನೇಕ ಬಾರಿ ಹೆದ್ದಾರಿ ಇಲಾಖೆಗೆ ಮನವಿ ಮಾಡಿದ್ದರೂ ಇದುವರೆಗೂ ಪ್ರಯೋಜನವಾಗಿಲ್ಲ ಈ ಬಗ್ಗೆ ಮುಂದಿನ ಹೋರಾಟದ ರೂಪುರೇಷೆಗಳನ್ನು ಚರ್ಚಿಸಬೇಕಾಗಿದೆ ಎಂದರು.. ಹೋರಾಟ ಸಭೆಗೆ ನಾಗರಿಕರ ಕೊರತೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಮೂಲ್ಕಿ ಟೂರಿಸ್ಟ್ ಕಾರು ಚಾಲಕ ಮಾಲಕರ ಸಂಘದ ಮಧು ಆಚಾರ್ಯ ಮಾತನಾಡಿ ನಾಗರಿಕರ, ರಾಜಕೀಯ ನಾಯಕರ ಬೆಂಬಲ ಇಲ್ಲದಿದ್ದರೆ ಕಾಟಾಚಾರಕ್ಕೆ ಸಭೆ ನಡೆಸಿ ಪ್ರಯೋಜನವಿಲ್ಲ ಎಂದರು.
ಉದ್ಯಮಿ ಕಮಲಾಕ್ಷ ಬಡಗಿತ್ಲು ಮಾತನಾಡಿ ಜನ ಬೆಂಬಲಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮುಲ್ಕಿ ನ. ಪಂ. ಸದಸ್ಯ ಯೋಗೀಶ್ ಕೋಟ್ಯಾನ್ ಮಾತನಾಡಿ ಮುಲ್ಕಿಯಲ್ಲಿ ಹೆದ್ದಾರಿ ಸರ್ವಿಸ್ ರಸ್ತೆ ಕಳೆದ ಕೆಲವರ್ಷಗಳಿಂದ ಅವ್ಯವಸ್ಥೆಯಿಂದ ಕೂಡಿದ್ದು ಹೆದ್ದಾರಿಯಲ್ಲಿ ಅಪಘಾತದ ಸರಮಾಲೆ ಎದುರಾಗುತ್ತಿದೆ. ಹೆದ್ದಾರಿ ಕಾಮಗಾರಿ ಪೂರ್ತಿಗೊಳಿಸದೆ ಟೋಲ್ ವಸೂಲಿ ಮಾಡುತ್ತಿರುವುದು ಅಪರಾಧ. ಕಳೆದ ಹಿಂದೆ ಮುಲ್ಕಿ ನಗರ ಪಂಚಾಯತಿಯಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಹೆದ್ದಾರಿ ಸರ್ವಿಸ್ ರಸ್ತೆ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ ಒಂದು ತಿಂಗಳಿನ ಒಳಗೆ ಪೂರ್ತಿ ಮಾಡಬೇಕೆಂದು ಎಚ್ಚರಿಕೆ ನೀಡಿದ್ದರೂ ಹೆದ್ದಾರಿ ಇಲಾಖೆ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಧನಂಜಯ ಮಟ್ಟು ಮಾತನಾಡಿ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಮುಲ್ಕಿಯಲ್ಲಿ ಅಭಿವೃದ್ಧಿ ಕಾಮಗಾರಿ ಹಿಂದೆ ಹೋಗಿದ್ದು ಎರಡು ಜಿಲ್ಲೆಯ ಶಾಸಕರು ಸಂಸದರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿ ಅಹವಾಲುಗಳನ್ನು ಮಂಡಿಸಿ ಮುಂದಿನ ಹೋರಾಟಕ್ಕೆ ಸಿದ್ಧರಾಗೋಣ ಎಂದರು. ಈ ಸಂದರ್ಭ ಮುಲ್ಕಿಯಲ್ಲಿ ಒಳಚರಂಡಿ ಅವ್ಯವಸ್ಥೆ, ಕಾರ್ನಾಡು ಕಟ್ಪಾಡಿ ಕಾರ್ ಅಂಗಡಿ ಬಳಿ ಫುಟ್ಪಾತ್ ಆಕ್ರಮಣ, ಬೀದಿ ನಾಯಿ ಹಾವಳಿ ಗಳ ಬಗ್ಗೆ ಚರ್ಚೆ ನಡೆಯಿತು. ಮುಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುಭಾಷ್ ಶೆಟ್ಟಿ ಮಾತನಾಡಿ ರಾಜಕೀಯ ರಹಿತ ಅಭಿವೃದ್ಧಿಗೆ ತಮ್ಮ ಬೆಂಬಲವಿದೆ ಎಂದರು.
ಮುಲ್ಕಿ ಅಭಿವೃದ್ಧಿ ನಾಗರಿಕ ಸಮಿತಿಯ ಹರೀಶ್ ಪುತ್ರನ್ ಮಾತನಾಡಿ ಎರಡು ಜಿಲ್ಲೆಗಳ ಶಾಸಕರು ಸಂಸದರು ಹಾಗೂ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಮುಂದೆ ಉಗ್ರವಾದ ಹೋರಾಟಕ್ಕೆ ಸಿದ್ಧರಾಗೋಣ ಎಂದರು. ಸಭೆಯಲ್ಲಿ ವಕೀಲರಾದ ಶಿವಾನಂದ ಕಾಮತ್, ರವೀಶ್ ಕಾಮತ್, ರೋಟರಿ ಸಂಸ್ಥೆಯ ನಾರಾಯಣ್, ಅಶೋಕ್ ಕುಮಾರ್ ಶೆಟ್ಟಿ, ಸುಜಿತ್ ಸಾಲ್ಯಾನ್, ಉದಯಕುಮಾರ್ ಶೆಟ್ಟಿ ಮತ್ತಿತರರು ಭಾಗವಹಿಸಿದ್ದರು.
Kshetra Samachara
07/02/2021 03:38 pm