ವಿಶೇಷ ವರದಿ: ರಹೀಂ ಉಜಿರೆ
ಬ್ರಹ್ಮಾವರ: ತಾಲೂಕಿನ ಬೆಟ್ಳಕ್ಕಿ- ಚಿತ್ರಪಾಡಿ ಗ್ರಾಮದ ಜನರು ಮೂಲತಃ ಬೇಸಾಯ ಮಾಡಿ ಜೀವನ ನಡೆಸುವವರು. ಹೆಚ್ಚೆಂದರೆ ಇಲ್ಲಿ 40ಮನೆಗಳಿವೆ. ದುರಂತವೆಂದರೆ ಈ ಗ್ರಾಮಸ್ಥರ "ಸೇತುವೆ" ಬೇಕೆಂಬ ಬೇಡಿಕೆ ನಮ್ಮ ಜನಪ್ರತಿನಿಧಿಗಳಿಗೆ ಇನ್ನೂ ಕೇಳಿಸುತ್ತಿಲ್ಲ.
ಮಹಾಮಳೆ ಬ್ರಹ್ಮಾವರ ತಾಲೂಕಿನ ಹಲವು ಗ್ರಾಮಗಳಲ್ಲಿ ಅನಾಹುತವನ್ನೇ ಸೃಷ್ಟಿಸಿದೆ. ಆ ಪೈಕಿ ಬೆಟ್ಳಕ್ಕಿ- ಚಿತ್ರಪಾಡಿ ಗ್ರಾಮವೂ ಒಂದು. ಬೇಸಾಯವನ್ನೇ ನಂಬಿದ ಇಲ್ಲಿನ ಜನ ಅಕ್ಷರಸ್ಥರಲ್ಲ. ಆದರೆ ಬೆವರು ಮತ್ತು ಶ್ರಮದ ಮೇಲೆ ನಂಬಿಕೆ ಇಟ್ಟು ಬದುಕುವವರು. ವಾರದ ಮಳೆಗೆ ಈ ಗ್ರಾಮಸ್ಥರ ಕೃಷಿ ಭೂಮಿ ಜಲಾವೃತಗೊಂಡಿದೆ. ಇದಕ್ಕೆ ಕಾರಣ ಊರಲ್ಲಿ ಹರಿಯುವ ಮಡಿಸಾಲು ಹೊಳೆ. ಪ್ರತೀ ಮಳೆಗಾಲಕ್ಕೆ ಹೊಳೆ ತುಂಬಿ ಹರಿದು ಇವರ ಕೃಷಿಭೂಮಿಗೆ ಹರಿದು ಬೆಳೆಯನ್ನೆಲ್ಲ ನಾಶ ಮಾಡುತ್ತಿದೆ.
ಇಲ್ಲಿರುವ ಸಣ್ಣ ಸೇತುವೆಯನ್ನು ಕೆಡವಿ ಎತ್ತರದಲ್ಲಿ ಒಂದು ಅಚ್ಚುಕಟ್ಟಾದ ಸೇತುವೆ ನಿರ್ಮಿಸಿ ಎಂಬುದು ಇವರ ಅತಿ ಚಿಕ್ಕ ಬೇಡಿಕೆ. ಆದರೆ ಈ ಬೇಡಿಕೆಯೂ ಸ್ಥಳೀಯ ಜನಪ್ರತಿನಿಧಿಗಳಿಗೆ ಕೇಳಿಸುತ್ತಿಲ್ಲ ಎಂಬುದೇ ಆಶ್ಚರ್ಯ. ಗ್ರಾಮದ ಜನರು, ಗ್ರಾಮಸ್ಥರ ಕೃಷಿಭೂಮಿ ಮತ್ತು ಜಾನುವಾರುಗಳಿಗೆ ಬಹಳ ಉಪಯೋಗವಾಗಬಹುದಾದ ಬ್ರಿಡ್ಜ್ ನಿರ್ಮಾಣ ಮಾಡಿದರೆ ಬಹುತೇಕ ಸಮಸ್ಯೆ ಬಗೆಹರಿಯುತ್ತದೆ ಎಂಬುದು ಗ್ರಾಮಸ್ಥರ ಅಭಿಪ್ರಾಯ.
ಐದು ದಿನಗಳ ಸತತ ಮಳೆಯಿಂದ ಗ್ರಾಮಸ್ಥರು ದಿಕ್ಕೇ ತೋಚದೆ ಕುಳಿತಿದ್ದಾರೆ. ತಮ್ಮ ಜಾನುವಾರು ಮತ್ತು ನೂರಾರು ಎಕರೆ ಕೃಷಿಭೂಮಿಯನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಈ ಗ್ರಾಮಸ್ಥರ ಸಮಸ್ಯೆಗೆ ಇನ್ನಾದರೂ ಪರಿಹಾರ ದೊರಕಿಸಿಕೊಡಬೇಕಿದೆ.
Kshetra Samachara
09/07/2022 07:16 pm