ಮುಲ್ಕಿ: ಚಾಲಕನ ನಿರ್ಲಕ್ಷ್ಯ, ಅತಿ ವೇಗದ ಚಾಲನೆಯ ಪರಿಣಾಮ ಲಾರಿಯೊಂದು ಇನ್ನೋವಾ ಕಾರಿಗೆ ಡಿಕ್ಕಿ ಹೊಡೆದು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಕ್ಷೀರಸಾಗರ ಪೆಟ್ರೋಲ್ ಬಂಕ್ ಬಳಿ ನಡೆದಿದೆ.
ಮಂಗಳೂರು ಕಡೆಯಿಂದ ಹೊಸಪೇಟೆ ಕಡೆಗೆ ಕಲ್ಲಿದ್ದಲು ಸಾಗಿಸುತ್ತಿದ್ದ ಲಾರಿಯ ಚಾಲಕನ ನಿರ್ಲಕ್ಷ್ಯದಿಂದಾಗಿ ಅಪಘಾತ ಸಂಭವಿಸಿದೆ. ಕಾರಿನಲ್ಲಿದ್ದ ಚಾಲಕ ಕೊಕ್ಕರಕಲ್ ನಿವಾಸಿ ರೋಹನ್ (36) ಹಾಗೂ ಪ್ರಯಾಣಿಕ ಅಂಗರಗುಡ್ಡೆ ನಿವಾಸಿ ರಮೇಶ್ ದೇವಾಡಿಗ (35) ಗಾಯಗೊಂಡು ಮುಲ್ಕಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಪಘಾತದ ರಭಸಕ್ಕೆ ಇನ್ನೋವಾ ಕಾರಿನ ಎದುರು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಕಾರಿನಲ್ಲಿ ಸಿಲುಕಿಕೊಂಡವರನ್ನು ಹೊರಗೆಳೆಯಲು ಸ್ಥಳೀಯರು ಹರಸಾಹಸ ಪಡಬೇಕಾಯಿತು. ಅಪಘಾತದ ಬಳಿಕ ಸ್ವಲ್ಪ ಹೊತ್ತಿನಲ್ಲಿ ಕಾರಿನಲ್ಲಿದ್ದ ಪರ್ಸ್ ಹಾಗೂ ಎಟಿಎಂ ಕಾರ್ಡ್ ಅನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಕಾರಿನ ಮಾಲೀಕ ದೂರಿದ್ದಾರೆ.
ಅಪಘಾತದ ಸಂದರ್ಭ ಕೆಲ ಹೊತ್ತು ಹೆದ್ದಾರಿ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸ್ಥಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಎರಡು ವಾಹನಗಳನ್ನು ತೆರವುಗೊಳಿಸಿದ್ದಾರೆ.
PublicNext
12/12/2024 10:03 pm