ಸುರತ್ಕಲ್: ಸುರತ್ಕಲ್ ಸಮೀಪದ ಬಾಳ ಗ್ರಾಮದ ಎಂ ಆರ್ ಪಿಎಲ್ ರಸ್ತೆಯಲ್ಲಿ ಸರ್ವೇ ನಂಬರ್ 185ರಲ್ಲಿ ಟ್ಯಾಂಕರ್ ಯಾರ್ಡ್ ನಿರ್ಮಾಣ ಮಾಡಲು ಕಂಪೆನಿ ಸ್ಥಳೀಯ ವ್ಯಕ್ತಿಗೆ ಗುತ್ತಿಗೆ ನೀಡಿದ್ದು ಗ್ರಾಮಸ್ಥರ ವಿರೋಧದ ಮಧ್ಯೆಯೂ ಅನಧಿಕೃತವಾಗಿ ಬೋರ್ಡ್ ಅಳವಡಿಸಿ ಶೆಡ್ ಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದರ ವಿರುದ್ಧ ಗ್ರಾಮಸ್ಥರು ಗುರುವಾರ ಬೆಳಗ್ಗೆ ಹಠಾತ್ ಧರಣಿ ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿದ್ದ ಗ್ರಾಮಸ್ಥರು ಸಾಮಾಜಿಕ ಹೋರಾಟಗಾರ್ತಿ ರೇಖಾ ಶೆಟ್ಟಿ ಬಾಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಪಿಡಿಒ ಮತ್ತು ಅಧಿಕಾರಿಗಳ ಸಮಕ್ಷಮ ಬೋರ್ಡ್ ತೆಗೆಸಿದ್ದಲ್ಲದೆ ವಿದ್ಯುತ್ ಸಂಪರ್ಕವನ್ನು ತೆರವುಗೊಳಿಸಲಾಯಿತು.
ಕುಂಬ್ಳಕೆರೆ, ಒಟ್ಟೆಕಾಯರ್ ರಸ್ತೆಗಳಿಗೆ ಸಂಪರ್ಕ ಕಲ್ಪಿಸುವ ಪ್ರದೇಶದಲ್ಲಿ 200ರಷ್ಟು ಕುಟುಂಬಗಳು ವಾಸ ಮಾಡುತ್ತಿವೆ. ರಸ್ತೆಯ ಅಗಲ ಕಿರಿದಾಗಿದ್ದು ವಾಹನ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ. ಇಲ್ಲಿ ಬುಲೆಟ್ ಗ್ಯಾಸ್ ಟ್ಯಾಂಕರ್ ನಿಲುಗಡೆಗೆ ಯಾರ್ಡ್ ನಿರ್ಮಾಣ ಮಾಡಿದಲ್ಲಿ ಜನಜೀವನಕ್ಕೆ ಮಾರಕವಾಗಲಿದೆ. ಗ್ಯಾಸ್ ಲೀಕೇಜ್ ಉಂಟಾದರೆ ಪ್ರಾಣಾಪಾಯ ಉಂಟಾಗಲಿದೆ. ಆದ್ದರಿಂದ ಇಲ್ಲಿ ಟ್ಯಾಂಕರ್ ಯಾರ್ಡ್ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಈಗಾಗಲೇ ಬಾಳ ಗ್ರಾಮ ಪಂಚಾಯತ್ ಗೆ ಮನವಿ ನೀಡಲಾಗಿತ್ತು.
ಪಂಚಾಯತ್ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರೂ ತೆರೆಮರೆಯಲ್ಲಿ ಟ್ಯಾಂಕರ್ ಯಾರ್ಡ್ ನಿರ್ಮಾಣಕ್ಕೆ ಕೆಲವು ಅಧಿಕಾರಿಗಳು ಅನುಮತಿ ನೀಡಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Kshetra Samachara
07/10/2021 10:12 pm