ತುಕ್ಕುಹಿಡಿದ ಕಬ್ಬಿಣ, ತುಂಡಾಗಿ ನೇತಾಡುವ ರಾಡ್ಗಳು, ಗ್ರೀಸಿಂಗ್ ಮಾಡದ ವೈಯರ್ ರೋಪ್ ಗಳು, ನಡೆದಾಡುವಾಗ ಭಯಪಡುವಷ್ಟು ಮೇಲೆ ಕೆಳಗೆ ಅಲುಗಾಡುವ ಹಲಗೆಗಳು.ಇದು ಪ್ರವಾಸಿಗರ ನೆಚ್ಚಿನ ತಾಣ ಪಡುಕುದ್ರು ಮತ್ತು ತಿಮ್ಮಣ್ಣಕುದ್ರುವಿನ ತೂಗುಸೇತುವೆಯ ಇಂದಿನ ಪರಿಸ್ಥಿತಿ!
ಉಡುಪಿ ನಗರಕ್ಕೆ ಕೇವಲ ಹತ್ತು ಕಿ.ಮೀ ದೂರದಲ್ಲಿರುವ ಪ್ರವಾಸಿತಾಣವಿದು. ನಿತ್ಯ ಇಲ್ಲಿಗೆ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ಬರ್ತಾರೆ. ಪಡುಕುದ್ರು ಮತ್ತು ತಿಮ್ಮಣ್ಣಕುದ್ರುವಿಗೆ ಹಿಂದೆ ದೋಣೆ ಮೂಲಕ ಸಂಪರ್ಕ ಇತ್ತು. ನಂತರ ತೂಗು ಸೇತುವೆ ನಿರ್ಮಾಣ ಮಾಡಲಾಯಿತು. ಆರಂಭದಲ್ಲಿ ಕುದ್ರುವಿಗೆ ಸಂಪರ್ಕಕ್ಕೆ ಮಾತ್ರ ಸೀಮಿತವಾಗಿದ್ದ ಈ ತೂಗು ಸೇತುವೆ ನಂತರದ ದಿನಗಳಲ್ಲಿ ಆಕರ್ಷಕ ಪ್ರವಾಸಿ ತಾಣವಾಗಿ ಮಾರ್ಪಾಡಾಗಿದೆ. ಆದರೆ ತೂಗು ಸೇತುವೆ ನಿರ್ವಹಣೆ ಇಲ್ಲದೇ ಅಪಾಯದ ಕರೆ ಗಂಟೆ ಬಾರಿಸುತ್ತಿದೆ.
ವೀಕೆಂಡ್ ಗಳಲ್ಲಿ ಪ್ರವಾಸಿಗರಿಂದ ತುಂಬಿರುವ ಈ ತೂಗು ಸೇತುವೆಯಲ್ಲಿ, ಸಿನಿಮಾ ಚಿತ್ರೀಕರಣಗಳು ಕೂಡ ನಡೆದಿವೆ. ಆದರೆ ಇಲಾಖೆಗಳ ನಿರ್ಲಕ್ಷ್ಯದಿಂದ, ನಿರ್ವಹಣೆ ಇಲ್ಲದೇ ಅಪಾಯವನ್ನು ಎದುರು ನೋಡುತ್ತಿದೆ. ಊರವರ ಕೊಂಡಿಯಂತಿರುವ ತೂಗು ಸೇತುವೆ ಕಳಚಿ ಬೀಳುವ ಭೀತಿಯಲ್ಲಿದೆ.
ಕಾಂಕ್ರೀಟ್ ಹಲಗೆಗಳಲ್ಲಿ ಮಧ್ಯೆ ಒಂದೆರಡು ಹಲಗೆಗಳು ಒಡೆದಿದ್ದು, ಈ ಭಾಗದಲ್ಲಿ ಎಚ್ಚರ ತಪ್ಪಿ ಕಾಲಿಟ್ಟರೆ ಅಪಾಯ ತಪ್ಪಿದ್ದಲ್ಲ. ಸೇತುವೆಯ ಎರಡೂ ಬದಿಗೆ ಸುರಕ್ಷತೆಗಾಗಿ ಅಳವಡಿಸಿರುವ ಕಬ್ಬಿಣದ ರಾಡ್ ಗಳು ತುಂಡಾಗಿ ನೇಲಾಡುತ್ತಿವೆ. ಸೇತುವೆಯನ್ನು ಹಿಡಿದಿಟ್ಟುಕೊಳ್ಳುವ ಪ್ರಮುಖ ವೈಯರ್ ರೋಪ್ ಗಳಿಗೆ ಗ್ರೀಸಿಂಗ್ ಮಾಡದೇ ಅನೇಕ ವರ್ಷಗಳು ಕಳೆದಿವೆ. ಎಲ್ಲ ನಟ್ ಬೋಲ್ಟ್ ಗಳು ತುಕ್ಕು ಹಿಡಿದು ಹಾಳಾಗಿವೆ. ಅಪಾಯ ಸಂಭವಿಸುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕಿದೆ.
PublicNext
28/07/2022 07:28 pm