ಮಂಗಳೂರು: ವಕ್ಸ್‌ಗೆ ಸೇರಿರುವ 29ಸಾವಿರ ಎಕರೆಯಷ್ಟು ಆಸ್ತಿಯನ್ನು ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಹಾಗೂ ಪ್ರಭಾವಿಗಳು ಕಬಳಿಸಿದ್ದಾರೆ. 2013ರಲ್ಲಿ ತಾನು ಸಲ್ಲಿಸಿದ್ದ ವರದಿಯ ಆಧಾರದಲ್ಲಿ, ತನಿಖೆ ನಡೆಸಿ, ಪ್ರಭಾವಿಗಳು ಕಬಳಿಕೆ ಮಾಡಿರುವ ಆಸ್ತಿಗಳನ್ನು ಮರಳಿ ವಶಕ್ಕೆ ಪಡೆದದ್ದಾದಲ್ಲಿ, ಸರ್ಕಾರ ವಕ್ಫ್ ಜಮೀನು ಅತಿಕ್ರಮಣ ವಿಚಾರದಲ್ಲಿ ರೈತರಿಗೆ ನೋಟಿಸ್ ನೀಡುವ ಪ್ರಮೇಯವೇ ಬರುವುದಿಲ್ಲ ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಹೇಳಿದರು.
ನಗರದ ಆರ್ಯ ಸಮಾಜದಲ್ಲಿ ಮಾತನಾಡಿದ ಅವರು, ವಕ್ಫ್ ಮಂಡಳಿಯ ನೋಂದಾಯಿತ ಆಸ್ತಿ 54 ಸಾವಿರ ಎಕರೆ ಇದೆ. ಹೀಗಿರುವಾಗ ರೈತರ ಜಮೀನುಗಳಿಗೆ ನೋಟಿಸ್ ಯಾಕೆ ನೀಡಿದ್ದು?. ತಾನು ಸಲ್ಲಿಸಿರುವ ವರದಿಯ ಆಧಾರದಲ್ಲಿ ಹಳೆಯ ಗಜೆಟ್ ಅಧಿಸೂಚನೆಗಳ ಆಧಾರದಲ್ಲಿ ತನಿಖೆ ನಡೆದರೆ, ವಕ್ಫ್ ಮಂಡಳಿಯ ನಿಜವಾದ ಆಸ್ತಿ ಎಷ್ಟು?, ಕಬಳಿಕೆ ಆಗಿದ್ದೆಷ್ಟು ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ. ಆಗ ಹಾಲಿನ ಪಾಲೆಷ್ಟು, ನೀರಿನ ಪಾಲೆಷ್ಟು ಯಾವುದು ಎಂಬುದು ಸ್ಪಷ್ಟವಾಗಲಿದೆ ಎಂದರು.
ಪ್ರಭಾವಿಗಳು ಕಬಳಿಕೆ ಮಾಡಿಕೊಂಡಿರುವ ವಕ್ಫ್ ಆಸ್ತಿಯ ಮೌಲ್ಯ 2012ರಲ್ಲಿ 2.30 ಲಕ್ಷ ಕೋಟಿ ರೂಪಾಯಷ್ಟಿತ್ತು. ಈ ಜಮೀನುಗಳಲ್ಲಿ ಪ್ರಭಾವಿಗಳು, ರಾಜಕೀಯ ಮುಖಂಡರು ವಾಣಿಜ್ಯ ಸಂಕೀರ್ಣ, ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳನ್ನೆಲ್ಲ ನಿರ್ಮಿಸಿದ್ದಾರೆ. ಸರಿಯಾದ ತನಿಖೆ ನಡೆದಿದ್ದೇ ಆದಲ್ಲಿ, ಅನೇಕರು ಜೈಲು ಸೇರಲಿದ್ದಾರೆ. ಸಿದ್ದರಾಮಯ್ಯರಿಗೆ ನಿಜವಾಗಿಯೂ ಮುಸ್ಲಿಮರ ಬಗ್ಗೆ ಕಾಳಜಿ ಇದ್ದರೆ, ನಾನು ದಾಖಲೆ ಸಮೇತ ನೀಡಿರುವ ವರದಿಯನ್ನು ಆಧರಿಸಿ ಸಮಗ್ರ ತನಿಖೆ ನಡೆಸಲಿ ಎಂದು ಸವಾಲೆಸೆದರು.
PublicNext
20/11/2024 06:49 pm