ಮುಲ್ಕಿ: ಮುಲ್ಕಿ ಬಳಿಯ ಪಡುಪಣಂಬೂರು ಕಲ್ಲಾಪು ಸಮೀಪ ಕಳೆದ ತಿಂಗಳ ಹಿಂದೆ ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಕುಸಿದ ಕಿರುಸೇತುವೆ ಕಾಮಗಾರಿ ವಾರದ ಹಿಂದೆ ನಿಧಾನಗತಿಯಲ್ಲಿ ಆರಂಭವಾಗಿದ್ದು, ಪ್ರಯಾಣಿಕರು, ಸ್ಥಳೀಯರು ಮತ್ತಷ್ಟು ತೊಂದರೆ ಗೀಡಾಗಿದ್ದಾರೆ.
ಕುಸಿದ ಸೇತುವೆ ಅಡಿಭಾಗದಲ್ಲಿ ತೀವ್ರ ನೀರಿನ ಒರತೆ ಇದ್ದ ಕಾರಣ ಕಾಂಕ್ರೀಟಿಕರಣಕ್ಕೆ ತೊಂದರೆಯಾಗಿದ್ದು, ಕಾಮಗಾರಿಗೆ ಅಡಚಣೆಯಾಗಿದೆ. ಕಾರ್ಮಿಕರು ಆಗಾಗ್ಗೆ ನೀರನ್ನು ಪಂಪ್ ಮೂಲಕ ಖಾಲಿ ಮಾಡುತ್ತಿದ್ದರೂ ಸುತ್ತಮುತ್ತ ಗದ್ದೆ ಇರುವ ಕಾರಣ ನೀರಿನ ಒರತೆ ಹೆಚ್ಚಾಗಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಕೆಲಸ ಮಾಡುವ ಕಾರ್ಮಿಕರ ಪ್ರಕಾರ ಕಾಮಗಾರಿ ಮುಗಿಯಲು ಒಂದು ತಿಂಗಳು ಬೇಕಾದೀತು ಎಂದಿದ್ದು, ತೋಕೂರಿನ ಇತಿಹಾಸ ಪ್ರಸಿದ್ಧ ಷಷ್ಠಿ ಮಹೋತ್ಸವದ ದಿನ ಕಾಮಗಾರಿ ಪೂರ್ತಿಗೊಳ್ಳುವ ಬಗ್ಗೆ ಅತಂತ್ರದಲ್ಲಿದೆ. ಕಾಮಗಾರಿ ನಿಧಾನವಾಗಿ ನಡೆಯುತ್ತಿರುವ ಕಾರಣ ಪ್ರಯಾಣಿಕರಿಗೆ ಮತ್ತಷ್ಟು ತೊಂದರೆಯಾಗಿದ್ದು, ಸುತ್ತು ಬಳಸಿ ಪಯಣಿಸುವ ಅನಿವಾರ್ಯತೆ ಎದುರಾಗಿದೆ. ಕಿನ್ನಿಗೋಳಿ ತೋಕೂರು ಕಡೆಯಿಂದ ಪಡುಪಣಂಬೂರಿ ಗೆ ಬರುವ ಪ್ರಯಾಣಿಕರು ಅರಿವಿಲ್ಲದೆ ಕುಸಿದಿರುವ ಕಲ್ಲಾಪು ರಸ್ತೆವರೆಗೆ ಬಂದು ವಾಪಸ್ ಹೋಗುತ್ತಿರುವುದು ಕಾಣುತ್ತಿದೆ. ಈ ಮಧ್ಯೆ ಕಲ್ಲಾಪು ಕಿರುಸೇತುವೆ ಬಳಿ ದ್ವಿಚಕ್ರ ವಾಹನ ಚಲಿಸಲು ಮೋರಿ ಹಾಕಿ ತಡೆಬೇಲಿ ಇಲ್ಲದ ಸಣ್ಣ ಸೇತುವೆ ನಿರ್ಮಿಸಿದ್ದು, ಅಪಾಯಕಾರಿಯಾಗಿದೆ. ಇದೇ ರಸ್ತೆಯಲ್ಲಿ ಪಡುಪಣಂಬೂರಿ ನಿಂದ ಕಲ್ಲಾಪು ರಸ್ತೆ ಬದಿ ಇಕ್ಕೆಲ ಮತ್ತಷ್ಟು ದೊಡ್ಡದಾಗಿ ಹುಲ್ಲು ಬೆಳೆದಿದ್ದು, ವಿಷಜಂತು ರಸ್ತೆಯಲ್ಲಿ ಕಾಣಿಸುತ್ತದೆ. ಈ ಹುಲ್ಲು ತೆಗೆಯಲು ಹಲವು ಬಾರಿ ಪಡುಪಣಂಬೂರು ಪಂಚಾಯಿತಿಗೆ ತಿಳಿಸಿದ್ದರೂ ಪಂ. ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥ ಧರ್ಮಾನಂದ ತೋಕೂರು ಆರೋಪಿಸಿದ್ದಾರೆ.
Kshetra Samachara
19/11/2020 08:42 am