ವಿಟ್ಲ: ರೈತರ ವಿನಾಶದ ದೃಶ್ಯಾವಳಿ ನೋಡಲು ಜಿಲ್ಲೆಯ ಶಾಸಕರು ಕಾಯುತ್ತಿರುವಂತಿದೆ. ರೈತರು 400 ಕೆ.ವಿ. ವಿದ್ಯುತ್ ಮಾರ್ಗ ನಿರ್ಮಿಸದಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದು, ಹೈಕೋರ್ಟ್ ರೈತರ ಮನವಿ ಪುರಸ್ಕರಿಸುವಂತೆ ನಿರ್ದೇಶನ ನೀಡಿದೆ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು ಹೇಳಿದರು.
ಹಠಮಾರಿತನ ಪ್ರದರ್ಶಿಸಿದ ಜಿಲ್ಲಾಧಿಕಾರಿ ವಿರುದ್ಧ ವಿಟ್ಲ ಪ್ರದೇಶದ 69 ರೈತರು, ವಕೀಲ ಧನಂಜಯ ಕುಮಾರ್ ಇರುವೈಲು ದೊಡ್ಡಗುತ್ತು ಮೂಲಕ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಜಿಲ್ಲಾಡಳಿತವು ರೈತರ ಮನವಿ ಪುರಸ್ಕರಿಸಬೇಕು. ರೈತರ ಮೇಲೆ ದಬ್ಬಾಳಿಕೆ ಮಾಡಿದರೆ ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ವಿಟ್ಲ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರಶೆಟ್ಟಿ ಬೈಲುಗುತ್ತು ಮಾತನಾಡಿ, ವಿದ್ಯುತ್ ಮಾರ್ಗದ ರಚನೆ ಬಗ್ಗೆ ವೈಜ್ಞಾನಿಕ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಕೇಳಿದ್ದು, ಮಾಹಿತಿಯನ್ನು ಇನ್ನೂ ನೀಡಿಲ್ಲ. ತಮಿಳುನಾಡು ಭಾಗದಲ್ಲಿ ಸಿದ್ಧಪಡಿಸಿದ ವೈಜ್ಞಾನಿಕ ವರದಿಯಲ್ಲಿ ಆತಂಕಕ್ಕೀಡಾಗುವ ವಿಚಾರಗಳಿದೆ. ಜಿಲ್ಲಾಡಳಿತ ವೈಜ್ಞಾನಿಕ ಮಾಹಿತಿ ತಕ್ಷಣ ಬಹಿರಂಗ ಪಡಿಸಬೇಕು. ವಿದ್ಯುತ್ ಮಾರ್ಗ ಯೋಜನೆ ಸ್ಥಗಿತ ಮಾಡದೇ ಹೋದಲ್ಲಿ ವಿಟ್ಲದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ಮಾಡಿ ಪ್ರತಿಭಟಿಸಲಾಗುವುದು ಎಂದರು.
Kshetra Samachara
12/01/2022 05:24 pm