ಮುಲ್ಕಿ: ಹಳೆಯಂಗಡಿ ಗ್ರಾಪಂ ವ್ಯಾಪ್ತಿಯ ಪಾವಂಜೆ ಗ್ರಾಮದ "ಅರಂದು" ರಸ್ತೆ ಇಕ್ಕೆಲದಲ್ಲಿ ಭಾರಿ ಎತ್ತರವಾಗಿ ಹುಲ್ಲು ಬೆಳೆದು ಅಪಾಯಕಾರಿಯಾಗಿದೆ ಎಂದು ಸ್ಥಳೀಯರಾದ ಕೇಶವ ಎಚ್. ತಿಳಿಸಿದ್ದಾರೆ.
ರಾ.ಹೆ. 66 ಹಳೆಯಂಗಡಿ ಪಾವಂಜೆ ಸೇತುವೆಯಿಂದ ಕೆಳ ಬದಿಗೆ "ಅರಂದು" ಕಡೆಗೆ ಹೋಗುವ ಒಂದುವರೆ ಕಿ.ಮೀ.ನಷ್ಟು ಕಾಂಕ್ರೀಟ್ ರಸ್ತೆ ಇಕ್ಕೆಲ ಹುಲುಸಾಗಿ ಹುಲ್ಲು ಬೆಳೆದಿದೆ. ಈ ಬಗ್ಗೆ ಅನೇಕ ಬಾರಿ ಹಳೆಯಂಗಡಿ ಪಂಚಾಯಿತಿಗೆ ತಿಳಿಸಿದ್ದರೂ ಕ್ರಮಕೈಗೊಂಡಿಲ್ಲ.
ಎರಡು ಭಾರಿ ಗಾತ್ರದ ವಾಹನಗಳು ಬಂದರೆ ಸಂಚರಿಸಲು ಅನಾನುಕೂಲವಾಗುತ್ತಿದೆ. ಇನ್ನೊಂದು ಬದಿ ಶಾಂಭವಿ ಹೊಳೆ ಹರಿಯುತ್ತಿದ್ದು ವಾಹನ ಚಾಲಕರಿಗೆ ಬೆಳೆದ ಹುಲ್ಲಿನಿಂದ ರಸ್ತೆ ಅಂಚು ತಿಳಿಯದೆ ಅಪಘಾತವಾಗುವ ಸಾಧ್ಯತೆ ಇದೆ. ಈ ಪ್ರದೇಶದಲ್ಲಿ ಕೆಲ ಅನಾಮಧೇಯ ವ್ಯಕ್ತಿಗಳು ನದಿಯಲ್ಲಿ ಮೀನಿಗೆ ಗಾಳ ಹಾಕಲು ಬರುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದು, ಅಕ್ರಮ ಧಂದೆಕೋರರಿಗೂ ಅನುಕೂಲವಾಗಿದೆ. ಕೋಳಿ ಅಂಕ, ಮರಳು ಸಾಗಾಟ ಸಹಿತ ಅನೇಕ ಅಕ್ರಮ ದಂಧೆ ಕದ್ದು ಮುಚ್ಚಿ ನಡೆಯುತ್ತಿದ್ದು ನಿಯಂತ್ರಿಸುವವರು ಇಲ್ಲದಂತಾಗಿದೆ.
ಈ ಬಗ್ಗೆ ಹಲವು ಬಾರಿ ಮುಲ್ಕಿ ಪೊಲೀಸರಿಗೆ ತಿಳಿಸಿದ್ದರೂ ಇದುವರೆಗೂ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಕೇಶವ ಆರೋಪಿಸಿದ್ದಾರೆ.
Kshetra Samachara
11/10/2020 01:21 pm