ವಿಶೇಷ ವರದಿ: ರಹೀಂ ಉಜಿರೆ
ಕಾಪು: ಕಳೆದ ಒಂದು ತಿಂಗಳಿನಿಂದ ಜಿಲ್ಲೆಯ ಕಾಪು ಸುದ್ದಿಯ ಕೇಂದ್ರದಲ್ಲಿದೆ.ಇದಕ್ಕೆ ಕಾರಣ ,ಇಲ್ಲಿನ ವಾರ್ಷಿಕ ಸುಗ್ಗಿ ಮಾರಿ ಪೂಜೆಯಲ್ಲಿ ಮುಸಲ್ಮಾನ ವರ್ತಕರಿಗೆ ಬಹಿಷ್ಕಾರ ಹಾಕಿದ್ದು. ನಂತರದ ದಿನಗಳಲ್ಲಿ ಕಾಪು ಮಾರಿಗುಡಿಯಲ್ಲಿ ತೆಗೆದುಕೊಂಡ ವ್ಯಾಪಾರ ಬಹಿಷ್ಕಾರ ನಿರ್ಧಾರ ಎಲ್ಲ ಕಡೆಗೂ ಹಬ್ಬಿ ,ಈಗ ಮುಸಲ್ಮಾನರಿಗೆ ಬಹುತೇಕ ದೇವಸ್ಥಾನಗಳಲ್ಲಿ ವ್ಯಾಪಾರ ಬಹಿಷ್ಕಾರ ಮುಂದುವರೆದಿದೆ.
ಇಂತಹ ಕಾಪುವಿನ ದೇವಸ್ಥಾನಗಳಲ್ಲಿ
ಮತ್ತು ದೈವಸ್ಥಾನಗಳಲ್ಲಿ ಕಳೆದ 5 ತಲೆಮಾರುಗಳಿಂದ ಶೇಖ್ ಜಲೀಲ್ ಸಾಹೇಬ್ ಅವರ ಮನೆತನ ನಾಗಸ್ವರ ನುಡಿಸಿಕೊಂಡು ಬರುತ್ತಿರುವುದು ,ಕರಾವಳಿಯ ಸೌಹಾರ್ದ ಪರಂಪರೆಗೆ ಅತ್ಯುತ್ತಮ ಉದಾಹರಣೆ.ಸದ್ಯ ಮುಸಲ್ಮಾನರ ಪವಿತ್ರ ರಮಝಾನ್ ಉಪವಾಸ ನಡೆಯುತ್ತಿದೆ. ಆದರೂ ಇವರ ನಾಗಸ್ವರ ವಾದನ ಸೇವೆ ಮಾತ್ರ ನಿರಂತರ!
ಕಾಪು ಲಕ್ಷ್ಮೀ ಜನಾರ್ದನ ದೇವಸ್ಥಾನ, ವೆಂಕಟರಮಣ ದೇವಸ್ಥಾನ, ಮಾರಿಗುಡಿ ದೇವಸ್ಥಾನ, ಹೊಸಮಾರಿಗುಡಿ ದೇವಸ್ಥಾನ, ಮೂರನೇ ಮಾರಿಗುಡಿ ದೇವಸ್ಥಾನ, ಕೊಪ್ಪಲಂಗಡಿ ವಾಸುದೇವ ದೇವಸ್ಥಾನ, ಕಲ್ಯ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಧರ್ಮದೈವ ಕಲ್ಕುಡ ದೈವಸ್ಥಾನ ಸೇರಿದಂತೆ ಹತ್ತಾರು ಕಡೆಗಳಲ್ಲಿ ನಡೆಯುವ ವಾರ್ಷಿಕ ಉತ್ಸವ, ಕೋಲ, ನೇಮ, ಆಶ್ಲೇಷಾ ಬಲಿ, ನಾಗ ಮಂಡಲ ಸಹಿತ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇವರದ್ದೇ ವಾಲಗ ಸೇವೆ ಎಂಬುದು ಗಮನಾರ್ಹ ಸಂಗತಿ.
ಕಳೆದ ಐದು ತಲೆಮಾರಿನಿಂದ ಈ ಮುಸ್ಲಿಂ ಕುಟುಂಬ ವಾಲಗ ಸೇವೆ ನಡೆಸುತ್ತಿದ್ದು ,ಕಾಪು ಸುತ್ತಮುತ್ತಲ ಹಿಂದೂ ಬಾಂಧವರಿಗೆ ಇವರು ಜಲೀಲ್ ಸಾಹೆಬ್ರು ಎಂದೇ ಪರಿಚಿತರು.ಕರಾವಳಿಯ ಹತ್ತಾರು ದೇವಸ್ಥಾನ ಮತ್ತು ದೇವಸ್ಥಾನಗಳಲ್ಲಿ ಇಂತಹ ಹಿಂದೂ ಮುಸ್ಲಿಂ ಸೌಹಾರ್ದ ಪರಂಪರೆ ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ.
PublicNext
06/04/2022 10:10 am