ವರದಿ: ರಹೀಂ ಉಜಿರೆ
ಬ್ರಹ್ಮಾವರ: ಪರಿಸರ ಸಂರಕ್ಷಣೆಯೊಂದಿಗೆ ಲಾಭದಾಯಕ ಕೃಷಿಯಲ್ಲಿ ತೊಡಗಿರುವವರು ಪುಣೆ ಕನ್ನಡಿಗ ಸತೀಶ್. ಬಿ. ಶೆಟ್ಟಿ.ರಕ್ತ ಚಂದನ ಗಿಡ ಬೆಳೆಸಿ, ಇತರರಿಗೂ ಬೆಳೆಸುವಂತೆ ಪ್ರೇರೇಪಿಸುತ್ತಿದ್ದಾರೆ. ಏನಿದು ರಕ್ತಚಂದನ? ಇದನ್ನು ಬೆಳೆಸುವುದು ಹೇಗೆ? ಇಲ್ಲಿದೆ ಒಂದು ಸ್ಟೋರಿ....
ಕೃಷಿ ಪರಂಪರೆ ಕ್ರಮೇಣ ನಾಶದ ಅಂಚಿನಲ್ಲಿದೆ. ಇಂತಹ ಕಾಲಘಟ್ಟದಲ್ಲಿ ಪರಿಸರದ ಉಳಿವಿಗಾಗಿ ಹೊಸತನದ ಅನ್ವೇಷಣೆಯೊಂದಿಗೆ ಪರಿಸರದ ಸಂರಕ್ಷಣೆ ಮಾಡುತ್ತಿರುವವರು ಸತೀಶ್ ಬಿ. ಶೆಟ್ಟಿ.ಲಾಭದಾಯಕ ರಕ್ತಚಂದನ ಬೆಳೆ ಬೆಳೆದು ಊರ ಹೆಣ್ಣು ಮಕ್ಕಳಿಗೂ ಆಸರೆಯೊಂದನ್ನೂ ಕಲ್ಪಿಸಬೇಕು ಎನ್ನುವ ನೂತನ ಪರಿಕಲ್ಪನೆಯೊಂದನ್ನು ಕಾರ್ಯರೂಪಕ್ಕೆ ತಂದಿದ್ದಾರೆ.....
ಪುಣೆಯ ಹೋಟೆಲ್ ಉದ್ಯಮಿಯಾಗಿರುವ ಇವರು, ಕಳೆದ ಮೂರು ವರ್ಷಗಳಿಂದ ತಮ್ಮ ಊರಾದ ಎಳ್ಳಂಪಳ್ಳಿಯ ಪರಿಸರ ಸಂರಕ್ಷಣೆಯ ಉದ್ದೇಶದೊಂದಿಗೆ ಹೆಣ್ಣುಮಕ್ಕಳಿಗೆ ತಲಾ 40 ಗಿಡಗಳಂತೆ ಸುಮಾರು 250 ಜನರಿಗೆ ಶ್ರೀಗಂಧ, ರಕ್ತಚಂದನ ಗಿಡಗಳನ್ನು ಉಚಿತವಾಗಿ ನೀಡಿದ್ದಾರೆ.
ಔಷಧ ತಯಾರಿಕೆಯಲ್ಲಿ ಬಳಕೆಯಾಗುವ ರಕ್ತಚಂದನ ಮರಕ್ಕೆ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಕಿಲೋ ಒಂದಕ್ಕೆ ರೂ. 4,500 ರಿಂದ 5,000 ರೂ. ಬೆಲೆ ಇದೆ. 10-12 ವರ್ಷ ಬೆಳೆದ ಒಂದು ಮರ ಕಡಿಮೆ ಎಂದರೂ ಒಂದು ಲಕ್ಷ ರೂ. ಬೆಲೆ ಬಾಳುತ್ತದೆ. ಖಾಲಿ ಜಾಗದಲ್ಲಿ ಹೆಣ್ಮಕ್ಕಳ ಹೆಸರಲ್ಲಿ ಶ್ರೀಗಂಧ, ರಕ್ತಚಂದನ ಗಿಡ ನೆಟ್ಟು ಎರಡು ವರ್ಷದ ತನಕ ಗಿಡಕ್ಕೆ ನೀರುಣಿಸಿ ಬೆಳೆಸಬೇಕಾಗುತ್ತದೆ. 15 ವರ್ಷಗಳ ಬಳಿಕ ಕಟಾವು ಮಾಡಿದರೆ ಮಕ್ಕಳಿಗೆ ಉತ್ತಮ ಶಿಕ್ಷಣ, ಮದುವೆ, ಆಸರೆಯಾಗುವುದಲ್ಲದೆ ಪರಿಸರವನ್ನು ಸಂರಕ್ಷಿಸುವಲ್ಲಿಯೂ ಬಹಳ ಉಪಯೋಗವಾಗಲಿದೆ. ಮಗಳ ಹೆಸರಿನಲ್ಲಿ 40 ಗಿಡಗಳನ್ನು ನೆಟ್ಟರೆ ಆಕೆಗೆ 18 ವರ್ಷ ತುಂಬಿದಾಗ ಸುಮಾರು 40 ಲಕ್ಷ ರೂ. ಆದಾಯವನ್ನು ಪಡೆಯಬಹುದು ಎನ್ನುತ್ತಾರೆ ಸತೀಶ್ ಬಿ. ಶೆಟ್ಟಿ.
ನೀವು ನಂಬಲೇಬೇಕು, ಶೆಟ್ಟಿ ಅವರ ಪರಿಶ್ರಮದಿಂದಾಗಿ ಈಗಾಗಲೇ ಸುಮಾರು ಇನ್ನೂರಕ್ಕೂ ಹೆಚ್ಚು ಎಕರೆ ಭೂಮಿಯಲ್ಲಿ ಅವರು ಹಂಚಿದ ರಕ್ತಚಂದನ ಬೆಳೆಯುತ್ತಿದೆ.ಈ ಮೊದಲು ಖಾಸಗಿ ಭೂಮಿಯಲ್ಲಿ ಬೆಳೆದ ರಕ್ತಚಂದನ ಕಡಿಯಲು ಅವಕಾಶ ಇರಲಿಲ್ಲ. ಆದರೆ ಎರಡು ವರ್ಷಗಳ ಹಿಂದೆ ಸರಕಾರ ಈ ಕಾಯಿದೆಯನ್ನು ರದ್ದುಗೊಳಿಸಿದ್ದು ಯಾರು ಬೇಕಾದರೂ ಖಾಸಗಿಯಾಗಿ ರಕ್ತಚಂದನ ಮತ್ತು ಶ್ರೀಗಂಧವನ್ನು ಬೆಳೆಸಬಹುದು.ಕಡಿದು ಮಾರಾಟ ಮಾಡಬಹುದು.ಈ ನಿಟ್ಟಿನಲ್ಲಿ ಶೆಟ್ಟರು ರಕ್ತಚಂದನ ಕೃಷಿ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರೂ ತಪ್ಪಲ್ಲ.
Kshetra Samachara
20/10/2021 04:53 pm