ಉಡುಪಿ: ಜಿಲ್ಲೆಯಲ್ಲಿ ಯಾವುದೇ ಮಂಕಿಪಾಕ್ಸ್ ಪ್ರಕರಣ ಈವರೆಗೆ ಪತ್ತೆಯಾಗಿಲ್ಲ. ಆದರೂ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದು, ವಿದೇಶ ಹಾಗೂ ಹೊರರಾಜ್ಯದಿಂದ ಬರುವವರ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ,ಮಂಕಿಪಾಕ್ಸ್ ಸಂಬಂಧ ಜಿಲ್ಲೆಯಲ್ಲಿ ಈಗಾಗಲೇ 2 ಬಾರಿ ಅಧಿಕಾರಿಗಳ ಸಭೆ ನಡೆಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ. ವಿದೇಶದಿಂದ ಬರುವವರ ಮಾಹಿತಿ ಪಡೆದು ಅವರ ಮೇಲೆ ನಿಗಾ ಇಡಲಾಗುತ್ತಿದೆ. ಕೇರಳಕ್ಕೆ ಬಂದಿರುವ ಒಬ್ಬರಿಗೆ ಮಂಕಿಪಾಕ್ಸ್ ಕಾಣಿಸಿಕೊಂಡಿರುವುದರಿಂದ ಅವರು ಪ್ರಯಾಣಿಸಿರುವ ವಿಮಾನದಲ್ಲಿದ್ದ ನಮ್ಮ ಜಿಲ್ಲೆಯವರ ಮಾಹಿತಿ ಕಲೆಹಾಕಿದ್ದು ನಿಗಾ ಇಡಲಾಗಿದೆ ಎಂದರು.
ಜನವರಿಯಿಂದ ಜೂನ್ ವರೆಗೆ ಉಡುಪಿಯಲ್ಲಿ 28, ಕುಂದಾಪುರದಲ್ಲಿ 44, ಕಾರ್ಕಳದಲ್ಲಿ 13 ಸೇರಿ 85 ಇಲಿಜ್ವರ ಪ್ರಕರಣಗಳು ಪತ್ತೆಯಾಗಿವೆ. ಸಾರ್ವಜನಿಕರು ಈ ಬಗ್ಗೆ ವಿಶೇಷ ಎಚ್ಚರ ವಹಿಸಬೇಕು. ಜ್ವರ ಬಂದ ತತ್ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜಿಲ್ಲೆಯ ಆರೋಗ್ಯ ಇಲಾಖೆಯ ಅಧಿಕಾರಿಗಳ ಜತೆಗೆ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶನ ನೀಡಲಾಗಿದೆ. ಜನರು ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
Kshetra Samachara
26/07/2022 03:15 pm