ಉಡುಪಿ: ಕನಿಷ್ಠ ವಿಮಾ ಮೊತ್ತ 1 ಲಕ್ಷ ರೂ. ಮರುಜಾರಿ, ವಿಮಾ ಪಾಲಿಸಿ ಖರೀದಿಗೆ ಗರಿಷ್ಠ ವಯೋಮಿತಿ ಏರಿಕೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಜೀವ ವಿಮಾ ಪ್ರತಿನಿಧಿಗಳ ಫೆಡರೇಶನ್ ಉಡುಪಿ ವಿಭಾಗದ ನೇತೃತ್ವದಲ್ಲಿ ಜೀವ ವಿಮಾ ಪ್ರತಿನಿಧಿಗಳು ಅಜ್ಜರಕಾಡು ಹುತಾತ್ಮ ಸ್ಮಾರಕದ ಮುಂಭಾಗದಲ್ಲಿ ಧರಣಿ ನಡೆಸಿದರು.
ಜೀವ ವಿಮಾ ಪ್ರತಿನಿಧಿಗಳ ಭವಿಷ್ಯದ ದೃಷ್ಟಿಯಿಂದ ಎಲ್‌ಐಸಿಗೆ ಮಾರಕವಾಗಿರುವ ಕೆಲವೊಂದು ಬದಲಾವಣೆಯನ್ನು ಶೀಘ್ರವೇ ನಿಲ್ಲಿಸಬೇಕು. ಹಿಂದಿನ ಕಮಿಷನ್ ದರ ಮರುಜಾರಿಗೊಳಿಸಬೇಕು. ಪ್ರೀಮಿಯಂ ಮೇಲಿನ ಜಿಎಸ್ ಟಿ ರದ್ದು ಮಾಡಬೇಕು ಎಂದು ಜೀವ ವಿಮಾ ಪ್ರತಿನಿಧಿಗಳು ಆಗ್ರಹಿಸಿದರು.
ಉಡುಪಿ ವಿಭಾಗೀಯ ಕೌನ್ಸಿಲ್‌ನ ಅಧ್ಯಕ್ಷ ಎ. ವಿಶ್ವನಾಥ್ ಗಟ್ಟಿ ವಗ್ಗ ಮಾತನಾಡಿ, ಕಮಿಷನ್ ದರದ ಪುನರ್ ರಚನೆಯ ಹೆಸರಿನಲ್ಲಿ ನಿಗಮದ ಆಡಳಿತ ಮಂಡಳಿಯು ಪ್ರತಿನಿಶಿಗಳ ಒಟ್ಟಾರೆ ಕಮಿಷನ್ ಗಳಿಕೆಯಲ್ಲಿ ಕಡಿತಗೊಳಿಸಿದೆ. ಅದು ಅತೀ ಹೆಚ್ಚು ಪಾಲಿಸಿ ಮಾರಾಟ ಮಾಡುವ ಪ್ರತಿನಿಧಿಗಳನ್ನು ನಿರುತ್ಸಾಹಗೊಳಿಸುತ್ತದೆ. ಈ ಪ್ರಯತ್ನವನ್ನು ನಾವು ಬಲವಾಗಿ ಖಂಡಿಸುತ್ತಿದ್ದು, ಎಲ್ಲಾ ಪ್ರತಿನಿಧಿಗಳಿಗೆ ಸಮಾನವಾದ ಕಮಿಷನ್ ದರವನ್ನು ನೀಡುವ ಪ್ರಕ್ರಿಯೆಯನ್ನು ಮುಂದುವರಿಸಬೇಕೆಂದು ಆಗ್ರಹಿಸಿದರು.
ಭಾರತೀಯ ಜೀವವಿಮಾ ನಿಗಮದ ಹಿರಿಯ ವಿಭಾಗಾಧಿಕಾರಿ ರಾಜೇಶ್ ಮುಧೋಳ್ ಅವರಿಗೆ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.
Kshetra Samachara
10/12/2024 06:15 pm