ಉಡುಪಿ: ಘಾಟಿ ಪ್ರದೇಶದಲ್ಲಿ ರೈಲುಗಳ ಓಡಾಟಕ್ಕೆ ಇರುವ ಬಿಗಿ ನಿಯಮಗಳನ್ನು ಸಡಿಲಗೊಳಿಸಬೇಕು ಸಹಿತ ಹಲವು ಬೇಡಿಕೆಗಳ ಬಗ್ಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿಯವರು ದಿಲ್ಲಿಯ ರೈಲು ಭವನದಲ್ಲಿ ರೈಲ್ವೆ ಸುರಕ್ಷೆ ಮತ್ತು ಟ್ರಾಫಿಕ್ ಅಧಿಕಾರಿಯನ್ನು ಭೇಟಿ ಮಾಡಿ ಚರ್ಚಿಸಿ ಮನವಿ ಸಲ್ಲಿಸಿದ್ದಾರೆ.
ಬೆಂಗಳೂರು-ಮಂಗಳೂರು-ಉಡುಪಿ-ಕುಂದಾಪುರ-ಕಾರವಾರ ನಡುವೆ ರೈಲು ಓಡಾಟಕ್ಕೆ ಇರುವ ಅತಿ ದೊಡ್ಡ ಸಮಸ್ಯೆಯಾಗಿರುವುದು ಸಕಲೇಶಪುರ ಸುಬ್ರಹ್ಮಣ್ಯ ಘಾಟಿ ಪ್ರದೇಶ. ಇದರಿಂದಾಗಿಯೇ ಪಂಚ ಗಂಗಾ ರೈಲು ಕಡಿಮೆ ಬೋಗಿಯಲ್ಲಿ ಓಡಾಡುತ್ತಿದೆ.ಬೆಂಗಳೂರು ಕರಾವಳಿ ನಡುವೆ ರೈಲಿನ ವೇಗ ಕಡಿಮೆಯಾಗಿರುವುದು ಕೂಡ ಘಾಟಿಯ ಸಮಸ್ಯೆಯಿಂದಲೇ.ಒಂದು ನಿಲ್ದಾಣ ಬಿಟ್ಟ ರೈಲು ಮತ್ತೊಂದು ಕ್ರಾಸಿಂಗ್ ನಿಲ್ದಾಣ ತಲುಪುವವರೆಗೆ ಬೇರೆ ರೈಲುಗಳು ಆ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಈಗ ಚಾಲ್ತಿಯಲ್ಲಿರುವ ಕ್ರಾಸಿಂಗ್ ರೈಲು ನಿಲ್ದಾಣಗಳು ಕೇವಲ ನಾಲ್ಕು ಮಾತ್ರ. ಹೀಗಾಗಿ ರೈಲುಗಳು ಕ್ರಾಸಿಂಗ್ ಮಾಡುವ ವ್ಯವಸ್ಥೆ ತೀರಾ ಕ್ಲಿಷ್ಟಕರ. ಪಂಚಗಂಗಾದಂಥ ರೈಲುಗಳು ಕ್ರಾಸ್ ಮಾಡುವ ಶಿರಬಾಗಿಲು ನಿಲ್ದಾಣದಲ್ಲಿ ಹೆಚ್ಚೆಂದರೆ 14 ಬೋಗಿಗಳ ರೈಲಷ್ಟೇ ಕ್ರಾಸ್ ಮಾಡಬಹುದು. ಈ ಎಲ್ಲ ಸಮಸ್ಯೆಗಳ ಪರಿಹಾರವಾಗಬೇಕಾದರೆ ಘಾಟಿ ನಿಯಮ ಸರಳಗೊಳ್ಳಬೇಕು ಹಾಗೂ ಇನ್ನೆರಡು ಹೊಸ ಕ್ರಾಸಿಂಗ್ ವ್ಯವಸ್ಥೆ ಇರುವ ರೈಲು ನಿಲ್ದಾಣಗಳು ಆರಂಭವಾಗಬೇಕು ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.
Kshetra Samachara
11/12/2024 12:09 pm