ಪಡುಬಿದ್ರಿ; ಉಡುಪಿ ಜಿಲ್ಲೆಯ ಎಲ್ಲೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಯುಪಿಸಿಎಲ್ ಉಷ್ಣ ವಿದ್ಯುತ್ ಸ್ಥಾವರದಿಂದ ಆಗಿರುವ ಸಮಗ್ರ ಹಾನಿಯ ಅಂದಾಜು ಮಾಡಲು ರಾಷ್ಟ್ರೀಯ ಹಸಿರು ಪೀಠದ ನಿರ್ದೇಶನದಂತೆ ರಚಿತವಾಗಿರುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ತಜ್ಞರ ಸಮಿತಿ ಪರಿಸರದ ಹಾನಿ ಕುರಿತು ಸಮಗ್ರ ಅಧ್ಯಯನ ನಡೆಸುತ್ತಿದೆ.
ಕಳೆದೆರಡು ದಿನಗಳಿಂದ ಗ್ರಾಮದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿದ್ದ ಸಮಿತಿ ಸದಸ್ಯರು ಯುಪಿಸಿಎಲ್ ಸ್ಥಾವರಕ್ಕೂ ಭೇಟಿ ನೀಡಿದ್ದಾರೆ.
ಕಲ್ಲಿದ್ದಲು ಆಧರಿತ ವಿದ್ಯುತ್ ಸ್ಥಾವರದ ಕಾರ್ಯವಿಧಾನ, ಮಾಲಿನ್ಯ ನಿಯಂತ್ರಣಕ್ಕೆ ಕಂಪೆನಿ ತೆಗೆದು ಕೊಂಡಿರುವ ಕ್ರಮಗಳು, ಕಲ್ಲಿದ್ದಲು, ಉಪ್ಪು ನೀರಿನ ನಿರ್ವಹಣೆಯ ವಿಧಾನಗಳ ಕುರಿತು ಕಂಪೆನಿಯ ಅಧಿಕಾರಿಗಳಿಂದ ಸಮಿತಿಯ ಸದಸ್ಯರು ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಸಾರ್ವಜನಿಕರಿಂದ ಕೇಳಿಬಂದ ದೂರುಗಳ ಬಗ್ಗೆ ಅವರ ವಿವರಣೆಯನ್ನು ಕೇಳಿದೆ.
ಇದಲ್ಲದೆ ಸಮಿತಿಯು ಜಿಲ್ಲಾಧಿಕಾರಿ ಕಚೇರಿ ಸಹಿತ ಹಲವು ಇಲಾಖೆಗಳಿಗೆ ತೆರಳಿ ಮಾಹಿತಿ ಸಂಗ್ರಹಿಸಿ ಫೆಬ್ರವರಿಯಲ್ಲಿ ವರದಿ ಸಲ್ಲಿಸಲಿದೆ.ಉಷ್ಣ ವಿದ್ಯುತ್ ಸ್ಥಾವರದಿಂದ ಪರಿಸರ ಹಾನಿಯಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ತಜ್ಞರ ಸಮಿತಿ ಆಗಮಿಸಿದ್ದು,2008 ರಿಂದ ಈತನಕ ಆದ ಪರಿಸರ ಹಾನಿ ಸಹಿತ ಬೆಳೆ ಹಾನಿ ಕುರಿತು ಅಧ್ಯಯನ ನಡೆಸಿ ವರದಿ ಸಲ್ಲಿಸಲಿದೆ.
Kshetra Samachara
10/12/2020 09:07 pm