ಬಂಟ್ವಾಳ: ಸರ್ಕಾರದ ಸೂಚನೆಯಂತೆ ಬಂಟ್ವಾಳ ತಹಸೀಲ್ದಾರ್ ಅವರ ಗ್ರಾಮವಾಸ್ತವ್ಯ ಕಾರ್ಯಕ್ರಮ ಅಮ್ಮುಂಜೆ ಗ್ರಾಪಂ ಸಭಾಂಗಣದಲ್ಲಿ ಶನಿವಾರ ನಡೆಯಿತು. ಗ್ರಾಪಂ ಅಧ್ಯಕ್ಷ ವಾಮನ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಗ್ರೇಡ್ 2 ಪ್ರಭಾರ ತಹಸೀಲ್ದಾರ್ ಕವಿತಾ ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭ ವಿವಿಧ ಇಲಾಖೆಗಳ ಸವಲತ್ತುಗಳನ್ನು ವಿತರಿಸಲಾಯಿತು. ಗ್ರಾಪಂ ಉಪಾಧ್ಯಕ್ಷೆ ಪ್ರಮೀಳಾ, ಗ್ರಾಮ ಪಂಚಾಯತ್ ಸದಸ್ಯರಾದ ಕಾರ್ತಿಕ್ ಬಲ್ಲಾಳ್, ರಾಧಾಕೃಷ್ಣ ತಂತ್ರಿ, ರವೀಂದ್ರ ಸುವರ್ಣ, ರೋನಾಲ್ಡ್ ಡಿ.ಸೋಜ, ಲೀಲಾವತಿ, ಭಾಗೀರಥಿ, ಪೌಝಿಯಾ, ಲೀಲಾವತಿ, ಲಕ್ಷ್ಮೀ, ಟಿಎಚ್.ಅಬ್ದುಲ್ ರಝಾಕ್, ನೆಫೀಸಾ, ಸರ್ವೆ ಇಲಾಖೆಯ ಎಡಿಎಲ್ಆರ್ ರೇಣುಕಾ ನಾಯಕ್ , ಉಪತಹಶೀಲ್ದಾರ್ ನರೇಂದ್ರ ನಾಥ್ ಭಟ್ ಮಿತ್ತೂರು, ಪ್ರಭಾರ ಕಂದಾಯ ನಿರೀಕ್ಷಕ ಧರ್ಮಸಾಮ್ರಾಜ್ಯ, ಸಿಬ್ಬಂದಿ ಗ್ರೆಟ್ಟಾ, ಅಮ್ಮುಂಜೆ ಗ್ರಾಮ ಲೆಕ್ಕಾಧಿಕಾರಿ ಪ್ರಶಾಂತ್ ಉಪಸ್ಥಿತರಿದ್ದರು. ಗ್ರಾಮಕರಣಿಕ ಜಗದೀಶ ಶೆಟ್ಟಿ ಸ್ವಾಗತಿಸಿದರು.
ಉಪತಹಸೀಲ್ದಾರ್ ದಿವಾಕರ ಮುಗುಳ್ಯ ವಂದಿಸಿದರು. ಉಪತಹಸೀಲ್ದಾರ್ ನವೀನ್ ಬೆಂಜನಪದವು ಕಾರ್ಯಕ್ರಮ ನಿರ್ವಹಿಸಿದರು.
ಈ ಸಂದರ್ಭ ವಿವಿಧ ವಿಚಾರಗಳ ಕುರಿತು ದೂರು ದುಮ್ಮಾನಗಳು ಕೇಳಿಬಂದವು. ಮನೆ ನಂಬರ್ ಅನ್ನು 20 ವರ್ಷಗಳಿಂದ ನೀಡಿಲ್ಲ ಎಂದು ಸದಾಶಿವ ಅಮ್ಮುಂಜೆ ಎಂಬವರು ದೂರಿದರು. ಅಕ್ರಮವಾಗಿ ಜಮೀನು ಅಗೆದ ಕಾರಣ ಕರುಣಾಕರ ಮೂಲ್ಯ ಎಂಬವರ ಮನೆ ಬೀಳುವ ಸ್ಥಿತಿ ಇದೆ ಎಂದು ಅವರ ಪತ್ನಿ ಕಣ್ಣೀರು ಹಾಕಿದರು.
ಬಿಸಿರೋಡಿನಿಂದ ಅಮ್ಮುಂಜೆ ಮಾರ್ಗವಾಗಿ ಪೊಳಲಿ ಸಂಪರ್ಕಕ್ಕೆ ಸರಕಾರಿ ಬಸ್ ಒದಗಿಸಬೇಕು ಕರಿಂಯಂಗಳದಲ್ಲಿರುವ ಗ್ರಾಮ ಕರಣಿಕ ರ ಕಚೇರಿಯ ನ್ನು ಅಮ್ಮುಂಜೆ ಗ್ರಾ.ಪಂ.ಕಚೇರಿಗೆ ವರ್ಗಾಯಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಅಬುಬಕ್ಕರ್ ಅಮ್ಮುಂಜೆ ಒತ್ತಾಯಿಸಿದರು. ನಮಗೆ ನಿವೇಶನಕ್ಕೆ ಜಾಗ ನೀಡಿ ಎಂಬ ಅರ್ಜಿಗಳು ಬಂದವು.
Kshetra Samachara
16/10/2021 04:50 pm