ಬ್ರಹ್ಮಾವರ: ಬೆಳೆ ಹಾನಿಯಾದ ಸಂದರ್ಭ ಪರಿಹಾರ ಪಡೆಯಲು ಹಾಗೂ ಕೃಷಿ ಸಾಲ ಪಡೆಯುವ ಸಂದರ್ಭ ಜಮೀನಿನಲ್ಲಿ ಯಾವ ಬೆಳೆಯನ್ನು ಬೆಳೆದಿದ್ದೇವೆ ಎನ್ನುವ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿರುತ್ತದೆ. ಆದ್ದರಿಂದ ಪ್ರತಿಯೊಬ್ಬರು ಬೆಳೆ ಸಮೀಕ್ಷೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಜಮೀನಿನ ವಿವರವನ್ನು ಇಲಾಖೆಗೆ ಮಾಹಿತಿ ನೀಡಬೇಕು ಎಂದು ಕೋಟ ಕೃಷಿ ಕೇಂದ್ರದ ಕೃಷಿ ಅಧಿಕಾರಿ ಸುಪ್ರಭಾ ತಿಳಿಸಿದರು.
ಅವರು ಇಂದು ಶಿರಿಯಾರ ಗ್ರಾ.ಪಂ.ನಲ್ಲಿ ನಡೆದ ಕೃಷಿ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿಯೊಬ್ಬರು ತಮ್ಮ ಮೊಬಲ್‌ನಲ್ಲಿ ಬೆಳೆ ಸಮೀಕ್ಷೆ ಆಫ್‌ಗಳ ಮೂಲಕ ಸುಲಭವಾಗಿ ಬೆಳೆ ನೋಂದಣಿ ಮಾಡಿಸಿಕೊಳ್ಳಬಹುದು. ಇದಕ್ಕಾಗಿ ಗ್ರಾಮಲೆಕ್ಕಾಧಿಕಾರಿಗಳು, ಕೃಷಿ ಸಹಾಯಕರ ಸಹಕಾರ ಪಡೆಯಬಹುದು. ರೈತರು ಈ ಬಗ್ಗೆ ನಿರ್ಲಕ್ಷ್ಯ ಮಾಡಿದರೆ ಮುಂದೆ ಸಮಸ್ಯೆಯಾಗಲಿದೆ ಎಂದರು.
ಶಿರಿಯಾರ ಗ್ರಾ.ಪಂ. ಅಧ್ಯಕ್ಷ ಸುಧೀಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ರೈತರು ಆಸಕ್ತಿಯಿಂದ ಕೃಷಿಯಲ್ಲಿ ತೊಡಗಿಕೊಳ್ಳುವಂತೆ ಹಾಗೂ ಪಂಚಾಯತ್‌ನಿಂದ ಅಗತ್ಯ ಮಾಹಿತಿಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು.
ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ತಳಿ ವಿಜ್ಞಾನಿ ಡಾ| ಶ್ರೀದೇವಿ ಭತ್ತದ ತಳಿಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಇಲಾಖೆಯ ಟ್ಯಾಬ್ಲೋ ಮೂಲಕ ಇಲಾಖಾ ಕಾರ್ಯಕ್ರಮದ ಕುರಿತು ಮಾಹಿತಿ ನೀಡಲಾಯಿತು.
ಗ್ರಾ,ಪಂ. ಉಪಾಧ್ಯಕ್ಷೆ ಅಮಿತಾ, ಗ್ರಾಮಲೆಕ್ಕಾಧಿಕಾರಿ ಶರತ್ ಶೆಟ್ಟಿ, ಪಿಡಿಒ ಸತೀಶ್ ವಡ್ಡರ್ಸೆ, ಬೆಳೆವಿಮೆಯ ಜಿಲ್ಲಾ ಪ್ರತಿನಿಧಿ ರವೀಂದ್ರ ಅವರು ವಿವಿಧ ವಿಚಾರದ ಕುರಿತು ಮಾಹಿತಿ ನೀಡಿದರು.
ಸಹಾಯಕ ಕೃಷಿ ಅಧಿಕಾರಿ ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
Kshetra Samachara
30/07/2021 07:44 pm