ಬೈಂದೂರು: ಬೈಂದೂರು ವಲಯದ ಮೂರು ಪ್ರೌಢಶಾಲೆಗಳಲ್ಲಿ ಸರ್ಕಾರದ ನಿಯಮ ಮೀರಿ ವಿದ್ಯಾರ್ಥಿಗಳ ತಂದೆ ತಾಯಿಯಲ್ಲದವರು ಎಸ್.ಡಿ.ಎಮ್.ಸಿಯ ಸದಸ್ಯರು ಮತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ನವೀನ್ ಚಂದ್ರ ಉಪ್ಪುಂದ ಹೇಳಿದ್ದಾರೆ.
ಅಧಿಕಾರಿಗಳಿಗೆ ರಾಜಕೀಯ ಒತ್ತಡ ಹೇರಿ ಅಧಿಕಾರ ನಡೆಸುತ್ತಿರುವ ಇವರ ಅವಧಿಯಲ್ಲಿ ನಡೆದ ಅರ್ಥಿಕ ಮತ್ತು ಹಣಕಾಸಿನ ವ್ಯವಹಾರ ಹಾಗೂ ಆಡಳಿತಾತ್ಮಕ ವೆಚ್ಚದ ಭ್ರಷ್ಟಾಚಾರದ ಕುರಿತು ತನಿಖೆಯಾಗಬೇಕು ಎಂದು ನವೀನ್‌ಚಂದ್ರ ಉಪ್ಪುಂದ ಹೇಳಿದ್ದಾರೆ.
ಬೈಂದೂರು ಬಿ.ಇ.ಒ ಕಛೇರಿ ವ್ಯಾಪ್ತಿಯಲ್ಲಿ 15 ಸರ್ಕಾರಿ ಪ್ರೌಢಶಾಲೆಗಳಿದ್ದು ವಂಡ್ಸೆ ಸರ್ಕಾರಿ ಪ್ರೌಢಶಾಲೆ ಕೆ.ಪಿ.ಎಸ್ ಆಗಿದ್ದು, ಉಳಿದ 14 ಸರ್ಕಾರಿ ಪ್ರೌಢಶಾಲೆಗಳಲ್ಲಿ ಕರ್ನಾಟಕ ಸರ್ಕಾರದ ಶಿಕ್ಷಣ ಇಲಾಖೆಯ ಅಧೀನ ಕಾರ್ಯದರ್ಶಿಗಳ 'ಜನವರಿ 2021ರ ಆದೇಶ'ದಂತೆ ವಿದ್ಯಾರ್ಥಿಗಳ ತಂದೆ ತಾಯಿಗಳು ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಅಧ್ಯಕ್ಷರಾಗಬೇಕೆಂಬ ಆದೇಶ ಹೊರಡಿಸಿದ್ದರು.
ಕಳೆದ ಒಂದೂವರೆ ವರ್ಷಗಳಿಂದ ಉಪ್ಪುಂದ, ಖಂಬದಕೋಣೆ ಹಾಗೂ ಮರವಂತೆ ಸರ್ಕಾರಿ ಪ್ರೌಢಶಾಲೆಗಳಲ್ಲಿ ಸರ್ಕಾರದ ಆದೇಶವನ್ನು ಪಾಲಿಸದೆ ಶಾಸಕರು ಆಯ್ಕೆ ಮಾಡಿದ ರಾಜಕೀಯ ವ್ಯಕ್ತಿಗಳ ಸಮಿತಿಯೇ ಮುಂದುವರಿದುಕೊಂಡು ಬರುತ್ತಿದೆ. ಆದ್ದರಿಂದ ಈ ಪ್ರೌಢಶಾಲೆಗಳ ಮುಖ್ಯೋಪಾದ್ಯಾಯರು ಮತ್ತು ಎಸ್.ಡಿ.ಎಮ್.ಸಿ ಸದಸ್ಯರ ಹಾಗೂ ಅಧ್ಯಕ್ಷರ ಮೇಲೆ ಅರ್ಥಿಕ ಹಾಗೂ ಆಡಳಿತಾತ್ಮಕ ವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ಅವರ ಅವಧಿಯಲ್ಲಿ ನಡೆಸಿದ ಆರ್ಥಿಕ ವ್ಯವಹಾರಗಳ ಒಟ್ಟು ಹಣವನ್ನು ಸರ್ಕಾರಕ್ಕೆ ಕಟ್ಟುವಂತೆ ಹಾಗೂ ಮುಂದಿನ ಎಲ್ಲಾ ಆಗುಹೋಗುಗಳಿಗೆ ಅವರನ್ನ ಜವಬ್ದಾರರನ್ನಾಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
Kshetra Samachara
14/09/2022 09:30 pm