ಕಾರ್ಕಳ : ತಾಲೂಕಿನ ನಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿನೂತನ ಕಾರ್ಯಕ್ರಮವೊಂದು ಇತರ ಶಾಲೆಗಳಿಗೆ ಮಾದರಿಯಾಗಿದೆ. ಶಾಲೆಯ ಅಕ್ಷರ ದಾಸೋಹದ ಸಿಬ್ಬಂದಿಗೆ ನಿವೃತ್ತಿ ಸಂದರ್ಭ ದಾನಿಗಳ ನೆರವಿನಿಂದ 50,000 ರೂ. ಸಹಾಯಧನ ವಿತರಿಸಲಾಗಿದೆ .ಸರಕಾರದಿಂದ ಪ್ರತಿ ಶಾಲೆಗಳಿಗೂ ಅಕ್ಷರ ದಾಸೋಹ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಸಿಬ್ಬಂದಿಗಳನ್ನು ನೇಮಿಸಲಾಗುತ್ತದೆ. .
ಆದರೆ ಅವರಿಗೆ ಗೌರವ ಧನ ಬಿಟ್ಟರೆ ಪ್ರತ್ಯೇಕವಾಗಿ ಯಾವುದೇ ಸೌಲಭ್ಯಗಳು ಸಿಗುವುದಿಲ್ಲ. ಈ ಬಗ್ಗೆ ಚಿಂತನೆ ನಡೆಸಿದ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಅಲ್ಲಿನ ಶಿಕ್ಷಕರ ತಂಡ ದಾನಿಗಳ ನೆರವಿನಿಂದ ಹಣವನ್ನು ಸಂಗ್ರಹಿಸಿ ಸಿಬ್ಬಂದಿಗೆ ನಿವೃತ್ತಿಯ ಅಂಚಿನಲ್ಲಿ ಸಹಾಯವಾಗಲಿ ಎನ್ನುವ ಉದ್ದೇಶದಿಂದ ಈ ಮೊತ್ತವನ್ನು ಹಸ್ತಾಂತರಿಸಿದೆ. ಅಕ್ಷರ ದಾಸೋಹ ಆರಂಭವಾದಂದಿರಿಂದ ಈವರೆಗೆ ಈ ಶಾಲೆಯಲ್ಲಿ ಸ್ಥಳೀಯ ನಿವಾಸಿ ಆನಂದಿ ಶೆಟ್ಟಿ ಎನ್ನುವವರು ಮುಖ್ಯ ಅಡುಗೆಯವರಾಗಿ ಸೇವೆ ಸಲ್ಲಿಸುತ್ತಿದ್ದರು.
ಆರಂಭದಲ್ಲಿ 300 ರೂ. ಗೌರವ ಧನ ಪಡೆಯುತ್ತಿದ್ದು, ಇದೀಗ 2500 ರೂ. ಸಿಗುತ್ತಿತ್ತು .ಪ್ರಸಕ್ತ ಸಾಲಿನಲ್ಲಿ ಸರಕಾರದ ನಿಯಮದ ಪ್ರಕಾರ ಅಕ್ಷರ ದಾಸೋಹ ಸಿಬ್ಬಂದಿಗಳು 60 ರಲ್ಲಿ ನಿವೃತ್ತಿ ಹೊಂದಬೇಕಾಗಿರುವುದರಿಂದ ಪ್ರಸ್ತುತ 62 ವರ್ಷದ ಆನಂದಿ ಶೆಟ್ಟಿ ಅವರು ನಿವೃತ್ತಿ ಪಡೆಯಬೇಕಾಯಿತು. ಈ ಬಾರಿ 1000 ಗೌರವ ಧನ ಹೆಚ್ಚಳವಾಗಿದ್ದರು ಆನಂದ ಶೆಟ್ಟಿಯವರಿಗೆ ಮಾತ್ರ ಅದನ್ನು ಪಡೆಯುವ ಅವಕಾಶ ಸಿಕ್ಕಿಲ್ಲ. .
ಈ ನಡುವೆ ಕಡು ಬಡತನದಲ್ಲಿರುವ ಆಕೆಯ ಸ್ಥಿತಿಯನ್ನು ಕಂಡು ಹಾಗೂ ಅವರು ಶಾಲೆಯಲ್ಲಿ ನೀಡಿದ ಸೇವೆಯನ್ನು ಪರಿಗಣಿಸಿ, ಈ ಧನ ಸಹಾಯದ ವ್ಯವಸ್ಥೆ ಮಾಡಲಾಗಿದೆ ಶಾಲೆಯ ಮೇಲೆ ಅಭಿಮಾನವನ್ನು ಇಟ್ಟು ಅತ್ಯಂತ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ ಆನಂದಿ ಶೆಟ್ಟಿಯವರಿಗೆ ನಿವೃತ್ತಿ ಅಂಚಿನಲ್ಲಿ ಸಹಕರಿಸುವ ಪ್ರಯತ್ನವನ್ನು ಶಾಲಾ ಅಭಿವೃದ್ಧಿ ಸಮಿತಿ ಶಿಕ್ಷಕ ವೃಂದ ಹಾಗೂ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ಮಾಡಿದ್ದು, ನೆರವು ನೀಡಿದ ದಾನಿಗಳಿಗೆ ಮುಖ್ಯ ಶಿಕ್ಷಕ ನಾಗೇಶ್ ಕೃತಜ್ಞತೆ ಸಲ್ಲಿಸಿದ್ದಾರೆ.
Kshetra Samachara
22/08/2022 08:37 pm