ಮುಲ್ಕಿ: ಮುಲ್ಕಿ ಸಮೀಪದ ಕೊಲ್ನಾಡುನಲ್ಲಿ ರಾಜ್ಯಮಟ್ಟದ ಕೃಷಿ ಮೇಳ ಕೃಷಿ ಸಿರಿ-2022ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಯೋಜಿತ ಪಾರಂಪರಿಕ ಕೃಷಿ ಗ್ರಾಮ ಭಾರೀ ಜನಾಕರ್ಷಣೆಗೆ ಪಾತ್ರವಾಗಿದೆ.
ಪಾರಂಪರಿಕ ಗ್ರಾಮದಲ್ಲಿ ತುಳುನಾಡಿನ ಗುತ್ತಿನ ಮನೆಯನ್ನು ನಿರ್ಮಿಸಲಾಗಿದ್ದು, ಇದರ ಆವರಣದಲ್ಲಿ ಹಿಂದಿನ ಕಾಲದಲ್ಲಿ ಭತ್ತವನ್ನು ಸಂರಕ್ಷಣೆ ಮಾಡುತ್ತಿದ್ದ ದೇಶೀಯ ವಿಧಾನ (ತುಪ್ಪೆ), ಭತ್ತದ ಬೈಹುಲ್ಲು ಸಂಗ್ರಹಣೆ ಮತ್ತಿತರ ಪ್ರಾತ್ಯಕ್ಷಿಕೆ ಎಲ್ಲರ ಗಮನ ಸೆಳೆಯುತ್ತಿದೆ. ವಿವಿಧ ತಳಿಯ ಗೋವು, ಆಡು, ಕುರಿ ಸಾಕಣೆ, ಚಮ್ಮಾರನ ಕುಟೀರ, ಮುಟ್ಟಾಳೆ ತಯಾರಿ, ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆ, ಮಾರಾಟಕ್ಕಿಟ್ಟ ಮಣ್ಣಿನ ಪಾತ್ರೆಗಳು, ಅರಣ್ಯ ಇಲಾಖೆಯ ನರ್ಸರಿ ಇತ್ಯಾದಿ ಜನರ ಆಕರ್ಷಣೆಯನ್ನು ಹೆಚ್ಚಿಸಿವೆ.
ಉಡುಪಿ ಜಿಲ್ಲೆಯ ಕಡ್ತಲದ ಶೀನ ಪರವರಿಂದ ಮೀನು ಹಿಡಿಯುವ ಕುತ್ತರಿ ತಯಾರಿ, ನದಿಯ ಬದಿಯಲ್ಲಿ ಸಿಗುವ ಓಂಟೆ ಜಾತಿಯ ಸಸ್ಯದಿಂದ ಕುತ್ತರಿ ತಯಾರಿ, ಅತ್ತೂರು ಪದವಿನ ನಾರಾಯಣ ಕುಲಾಲ್, ಸುಂದರಿ ಕುಲಾಲ್ ದಂಪತಿಯಿಂದ ಸ್ಥಳದಲ್ಲೇ ಮಣ್ಣಿನ ಪಾತ್ರೆ, ಕಾವಲಿ, ಇತ್ಯಾದಿ ಪರಿಕರಗಳ ತಯಾರಿ ಜನಮನ ಸೆಳೆಯುತ್ತಿವೆ.
ಎಕ್ಕಾರಿನ ಸುಮತಿ ಕುಲಾಲ್ ಮತ್ತು ಸತೀಶ್ ತೆಂಗಿನ ಗರಿಯಿಂದ ಮಡಲು ಹೆಣೆಯುವುದು, ಆದರ್ಶ್ ರಿಂದ ದೈವಾರಾಧನೆಯಲ್ಲಿ ಬಳಸುವ ಸಿರಿ, ಅಣಿ ತಯಾರಿ ಪ್ರಾತ್ಯಕ್ಷಿಕೆ, ದೈವಾರಾಧನೆಯಲ್ಲಿ ಬಳಸುವ ತತ್ರ ತಯಾರಿಯಲ್ಲಿ ವಿಶ್ವನಾಥ್, ಹಾಗೂ ದೈವದ ಮಣಿಸರ ಆಭರಣ ತಯಾರಿಯಲ್ಲಿ ಮಂಜುನಾಥ್ ಓಂತಿಬೆಟ್ಟು ಪಾರಂಪರಿಕ ಗ್ರಾಮದಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲೇ ಪಕ್ಕದಲ್ಲಿ ಅಡಿಕೆ ಹಾಳೆಯಿಂದ ಮುಟ್ಟಲೆ ತಯಾರಿಸುವಲ್ಲಿ ಕೊರಗ ಪಾಣಾರ ಮತ್ತು ಚಾಪೆ ಹೆಣೆಯುವ ಕಾಯಕದಲ್ಲಿ ಮರ್ಣೇ ಗ್ರಾಮದ ನಿವಾಸಿ ಗುಲಾಬಿ ಪಾಣಾರ ಜನರ ಆಕರ್ಷಣೆಗೆ ಪಾತ್ರರಾಗಿದ್ದಾರೆ.
Kshetra Samachara
13/03/2022 11:52 am