ಉಡುಪಿ: ಯುವ ವಾಹಿನಿ ಉಡುಪಿ ಘಟಕದ ಆಶ್ರಯದಲ್ಲಿ ದಿನಾಂಕ 28.11.2021ರ ಆದಿತ್ಯವಾರ ಬನ್ನಂಜೆ ಬಾಬು ಅಮೀನ್ ಜನಪದ ಪ್ರಶಸ್ತಿ ಪ್ರದಾನ ಸಮಾರಂಭವು ಉಡುಪಿ ಚಿಟ್ಟಾಡಿಯ ಲಕ್ಷ್ಮೀ ಟ್ರೇಡ್ ಸೆಂಟರ್‌ನ ಲಕ್ಷ್ಮೀ ಸಭಾಭವನದಲ್ಲಿ ಜರಗಲಿದೆ ಎಂದು ಯುವವಾಹಿನಿ ಸಂಘಟಕರು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಸಂಘಟಕರು ,ಜಾನಪದ ವಿದ್ವಾಂಸ ಪ್ರಶಸ್ತಿಯನ್ನು ಹಿರಿಯ ಜನಪದ ವಿದ್ವಾಂಸರೂ, ಶಾಸ್ತ್ರೀಯ ಕನ್ನಡ ಅಧ್ಯಯನ ಕೇಂದ್ರ, ಭಾರತೀಯ ಭಾಷಾ ಸಂಸ್ಥಾನ ಮೈಸೂರು ಇಲ್ಲಿನ ಯೋಜನಾ ನಿರ್ದೇಶಕರೂ ಆದ ಪ್ರೊ. ಬಿ. ಶಿವರಾಮ ಶೆಟ್ಟಿ ಇವರಿಗೆ ನೀಡಲಿದ್ದೇವೆ. ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ, ಕನಕ ಅಧ್ಯಯನ ಪೀಠದ ನಿರ್ದೇಶಕರಾಗಿ ಕನಕ ತತ್ತ್ವಗಳನ್ನು ನಾಡಿನಾದ್ಯಂತ ಪ್ರಸರಣೆ ಮಾಡಿರುತ್ತಾರೆ. ಮಂಗಳೂರು ವಿ.ವಿ.ಯ ಹಲವಾರು ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಲ್ಲದೆ ಕನ್ನಡ ಜನಪದ ಕುರಿತು ಹಲವಾರು ಸಾಹಿತ್ಯ ಹಾಗೂ ಪಠ್ಯ ಪುಸ್ತಕಗಳನ್ನು ಕೂಡ ರಚಿಸಿದರು. 50ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ. 70ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದವರು. ಪ್ರಸ್ತುತ ಕನ್ನಡ ಪರಂಪರೆಯ ಸಂಶೋಧನಾ ಕಾರ್ಯಗಳನ್ನು ವಿಸ್ತರಿಸುವ ಕಾರ್ಯಗಳನ್ನು ಭಾರತೀಯ ಭಾಷಾ ಸಂಸ್ಥಾನದ ಮೂಲಕ ನಡೆಸುತ್ತಿದ್ದಾರೆ.
ಜನಪದ ಕಲಾವಿದ ಪ್ರಶಸ್ತಿಯನ್ನು ಯಕ್ಷಗಾನ ವಿಭಾಗದ ಉಭಯ ತಿಟ್ಟುಗಳ ಪ್ರಸಿದ್ಧ ಹಾಸ್ಯ ಕಲಾವಿದರೂ, ಹೂವಿನಕೋಲು, ಚಿಕ್ಕಮೇಳ ತಂಡಗಳನ್ನು ಮುನ್ನಡೆಸಿ, ಬಹು ಆಯಾಮದ ಕಲಾ ಪ್ರಕಾರಗಳಲ್ಲಿ ಯಕ್ಷಗಾನ ಕಲೆಗೆ ಜೀವ ತುಂಬಿ ಪ್ರಸ್ತುತ ಹೊಸನಗರ ಮೇಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಸೀತಾರಾಮ್ ಕಟೀಲ್ ಇವರಿಗೆ ನೀಡಲಿದ್ದು, ಯಕ್ಷಗಾನದ ಚಾರ್ಲಿ ಚಾಪ್ಲಿನ್ ಎಂದೇ ಖ್ಯಾತರಾದ ಸೀತಾರಾಮ್ ಕುಮಾರ್ ಕಟೀಲ್ 60ರ ಅಭಿನಂದನಾ ಕಾರ್ಯಕ್ರಮದಲ್ಲಿ ವಿವಿಧ ರಂಗದಲ್ಲಿ ಗಣನೀಯ ಸಾಧನೆಗೈದ 60 ಜನ ಗಣ್ಯರನ್ನು ಅಭಿನಂದಿಸುವ ಮೂಲಕ ಅಪರೂಪದ ಕಾರ್ಯಕ್ರಮವನ್ನು ಹಮ್ಮಿಕೊಂಡವರು. ಪ್ರಶಸ್ತಿಯು ತಲಾ 10000 ನಗದಿನೊಂದಿಗೆ ಪ್ರಶಸ್ತಿ ಫಲಕ ಹಾಗೂ ಸ್ಮರಣಿಕೆಯನ್ನು ಹೊಂದಿದೆ ಎಂದು ತಿಳಿಸಿದರು.
Kshetra Samachara
24/11/2021 12:25 pm