ಬಂಟ್ವಾಳ: ಕರ್ನಾಟಕ ರಾಜ್ಯ ರೈತ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಶ್ರಯದಲ್ಲಿ ಪ್ರೊ. ಎಂ.ಡಿ. ನಂಜುಂಡಸ್ವಾಮಿ ನೆನಪು ಕಾರ್ಯಕ್ರಮ ನಡೆಯಿತು.
ಬಿ.ಸಿ.ರೋಡಿನ ರಿಕ್ಷಾ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈತ ಜಾಗೃತಿ ದಿನಾಚರಣೆ, ಇಂದಿನ ಕೃಷಿ ಮಸೂದೆಗಳು ಎಮ್.ಡಿ.ಎನ್.ರವರ ಮುಂದಾಲೋಚನೆಗಳ ಕುರಿತು ವಿಚಾರಗೋಷ್ಠಿ ಹಾಗೂ ಸಂವಾದ ನಡೆದವು. ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಮ್.ಡಿ.ಎನ್.ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಸಿದ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ, ರೈತಸಂಘದ ಹುಟ್ಟು ನಡೆದು ಬಂದ ದಾರಿ ಎಮ್.ಡಿ.ಎನ್. ರವರು ಗ್ಯಾಟ್ ಒಪ್ಪಂದದಿಂದ ಮುಂದಿನ ದಿನಗಳಲ್ಲಿ ಕೃಷಿ ಕ್ಷೇತ್ರ ಹಾಗೂ ದುಡಿಯುವ ಜನತೆಯ ಬದುಕಿನ ಮೇಲೆ ಆಗಬಹುದಾದ ದುಷ್ಪರಿಣಾಮ ಗಳ ಕುರಿತು 90 ರ ದಶಕದಲ್ಲಿಯೇ ನೀಡಿದ ಎಚ್ಚರಿಗೆಯ ಸಲಹೆಗಳನ್ನು ನೆನಪಿಸಿದರು.
ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ರೈತ ಸಂಘಟನೆಗಳನ್ನು ಒಂದು ವೇದಿಕೆಯ ಅಡಿಯಲ್ಲಿ ತಂದು ರೂಪಿಸಿದ ಹೋರಾಟಗಳನ್ನು ನಾವು ಗಟ್ಟಿಗೊಳಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು. ಜೊತೆಗೆ ಪ್ರಸ್ತುತ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನೂತನ ಮಸೂದೆಗಳ ದುಷ್ಪರಿಣಾಮಗಳ ಕುರಿತು ವಿಚಾರ ಮಂಡಿಸಿ ಯಾವುದೇ ಕಾರಣಕ್ಕೂ ಈ ಮಸೂದೆಗಳು ಹಿಂಪಡೆಯುವ ತನಕ ಚಳುವಳಿಯನ್ನು ತೀವ್ರಗೊಳಿಸಲು ವಿನಂತಿಸಿದರು.
ವಿಚಾರಗೋಷ್ಠಿಯಲ್ಲಿ ಹಿರಿಯ ರೈತ ಮುಖಂಡರಾದ ಸನ್ನಿ ಡಿಸೋಜ, ಬಂಟ್ವಾಳ ತಾಲೂಕು ಅಧ್ಯಕ್ಷರಾದ ಕೆ.ಪ್ರೇಮನಾಥ ಶೆಟ್ಟಿ ಬಾಳ್ತಿಲ, ಸುಳ್ಯ ತಾಲೂಕು ಅಧ್ಯಕ್ಷರಾದ ಲೋಲಜಾಕ್ಷ ಗೌಡ ಭೂತಕಲ್ಲು ವಿಚಾರ ಮಂಡಿಸಿದರು. ಸಂವಾದವನ್ನು ಓಸ್ವಾಲ್ಡ್ ಪ್ರಕಾಶ್ ಪೆರ್ನಾಂಡಿಸ್ ರವರು ನಡೆಸುವ ಮೂಲಕ ಜಿಲ್ಲೆಯಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಿಷ್ಟವಾಗಿ ಕಟ್ಟಿ ಚಳುವಳಿಯನ್ನು ಆಂದೋಲನವಾಗಿ ರೂಪಿಸುವಲ್ಲಿ ಶಕ್ತಿಮೀರಿ ಶ್ರಮಿಸುವುದಾಗಿ ಹೇಳಿದರು.
ಸುಳ್ಯ ತಾಲೂಕು ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿ, ಬಂಟ್ವಾಳ ತಾಲೂಕು ಸಂಘಟನಾ ಕಾರ್ಯದರ್ಶಿ ಸದಾನಂದ ಶೀತಲ್ ಧನ್ಯವಾದ ನೀಡಿದರು. ಸಭೆಯಲ್ಲಿ ಜಿಲ್ಲಾ ಉಪಾಧ್ಯಕ್ಷರಾದ ದಿವಾಕರ ಪೈ ಮಜಿಗುಂಡಿ. ಲೊರೆಟ್ಟೊ ವಲಯ ಘಟಕದ ಪ್ರಧಾನ ಕಾರ್ಯದರ್ಶಿ ವಿ ವಿಯನ್ ಪಿಂಟೀ, ಐವರ್ನಾಡು ಗ್ರಾಮಘಟಕದ ಕಾರ್ಯದರ್ಶಿ ಮಂಜುನಾಥ ಮಡ್ತಿಲ, ಪೆರ್ನೆ ವಲಯ ಘಟಕದ ಉಪಾಧ್ಯಕ್ಷರಾದ ಹುಸೈನಾರ್ ನೀರುಮಾರ್ಗ ಘಟಕದ ಅಧ್ಯಕ್ಷರಾದ ವಿನ್ಸೆಂಟ್, 400 ಕೆವಿ. ವಿದ್ಯುತ್ ಮಾರ್ಗದ ಅತಂಕಿತ ಸಂತ್ರಸ್ತರ ಸಮಿತಿಯ ಸಂಚಾಲಕರಾದ ರೋಯ್ ಕಾರ್ಲೋ ಹಾಗೂ ಇತರ ಸದಸ್ಯರು ಭಾಗವಹಿದ್ದರು.
Kshetra Samachara
14/02/2021 06:28 pm