ಕಾರ್ಕಳ: ನವರಾತ್ರಿ ಬಂತೆಂದರೆ ಹೆಣ್ಣು ಮಕ್ಕಳಿಗೆ ತಾವು ಶಾರದೆಯಾಗುವ ಆಸೆ. ಅಕ್ಷರ, ಜ್ಞಾನದ ದೇವತೆಯ ರೂಪವನ್ನು ತನ್ನ ಮಗಳಲ್ಲಿ ಕಾಣುವುದೆಂದರೆ ತಂದೆ ತಾಯಿಯರಿಗೂ ಪ್ರೀತಿ ಮತ್ತು ಭಕ್ತಿ. ಇದು ಕಾರ್ಕಳದ ಶ್ರೀನಿಧಿಯ ಶಾರದಾ ಆರಾಧನೆ. ಪ್ರಸಿದ್ಧ ಛಾಯಾಗ್ರಾಹಕ ಶರತ್ ಕಾನಂಗಿಯವರ ಮಗಳು ಈಕೆ.
ಶಾರದೆಯಾಗುವುದೆಂದರೆ ಹೊಸ ಸೀರೆ ಉಟ್ಟು, ಮೇಕಪ್ ಮಾಡಿ, ಹೂ ಮುಡಿದು ನಟಿಸಿದರಾಯ್ತು ಎಂದುಕೊಂಡರೆ ಅದು ನಿಮ್ಮ ತಪ್ಪು. 19 ವರ್ಷದ ಈ ಶ್ರೀನಿಧಿ ಶಾರದಾ ದೇವಿಯ ಆರಾಧಕಿ. 21 ದಿನಗಳ ವ್ರತ ಮಾಡಿ ದೇವಿಯ ರೂಪಕ್ಕಾಗಿ ಸಿದ್ಧವಾಗಿದ್ದಾಳೆ. ನಗುವಿನಲ್ಲಿ, ವೀಣೆಯಲ್ಲಿ, ಮಗುವಿಗೆ ಮೊದಲ ಅಕ್ಷರ ಕಲಿಸುವಲ್ಲಿ ತಾಯಿ ಶಾರದೆಯೇ ಆಗಿದ್ದಾಳೆ.
ಕರಾವಳಿ ಭಾಗದ ಇನ್ನೊಂದು ವಿಶೇಷ, ಮಲ್ಲಿಗೆ ಹೂವಿನ ಜಲ್ಲಿ ಅಲಂಕಾರ. ಈ ಭಾಗದ ಶಾರದಾ ಮೂರ್ತಿಯ ಅಲಂಕಾರ ಹೆಚ್ಚಾಗಿ ಜಲ್ಲಿಯೇ ಆಗಿರುತ್ತದೆ. ಅದು ಸುಲಭದ ಕಲೆಯಲ್ಲ. ಸಮಯ, ತಾಳ್ಮೆ ಬೇಡುವ ಕೆಲಸವದು. ಕಾರ್ಕಳದ ಶಿಲ್ಪ ಕಿಣಿ ಸುಂದರವಾಗಿ ಜಲ್ಲಿಯ ಅಲಂಕಾರ ಮಾಡಿದ್ದಾರೆ. 5 ವರ್ಷದ ಮಗುವಾಗಿದ್ದಾಗ ಜಲ್ಲಿ ಹಾಕಿದ್ದ ಶ್ರೀನಿಧಿಯ ಕನಸನ್ನು ಎರಡನೇ ಬಾರಿ ಶಾರದೆಯ ರೂಪದಲ್ಲವರು ಈಡೇರಿಸಿದ್ದಾರೆ.
ತಾಯಿ ಶಾರದೆಯ ಈ ರೂಪ, ಅಕ್ಷರದ ಪ್ರೇರಣೆ, ನಗುವಿನ ಹಾರೈಕೆಯನ್ನು ಸುಂದರವಾಗಿ ಸೆರೆ ಹಿಡಿದವರು ಈ ಹಿಂದೆ ಚೌತಿಯ ಬಗ್ಗೆ ವಿಶೇಷ ಕಿರುಚಿತ್ರ, ಅಷ್ಟಮಿಗೆ ರವಿ ಕಟಪಾಡಿಯ ವೇಷದ ಕುರಿತು ಸಾಕ್ಷ್ಯಚಿತ್ರ ಮಾಡಿ ಗಮನಸೆಳೆದಿದ್ದ ಅಜಯ್ ಮೊಯ್ಲಿ. ಶಾರದೆಗಾಗಿ ಶ್ರೀನಿಧಿ ವೃತ ಆಚರಿಸಿದಂತೆ ಚಿತ್ರೀಕರಣಕ್ಕಾಗಿ ಅಜಯ್ ಮೊಯ್ಲಿ ತೋರಿದ ಶ್ರದ್ಧೆ, ಪ್ರತಿಭೆಯನ್ನು ಈ ವೀಡಿಯೋ ಹೇಳುತ್ತದೆ.ಸದ್ಯ ಈ ಪುಟಾಣಿ ಶಾರದೆಯ ವಿಡಿಯೋ ವೈರಲ್ ಆಗುತ್ತಿದ್ದು ಆಸ್ತಿಕರ ಮನಗೆದ್ದಿದೆ.ಈ ಹುಡುಗಿಗೆ ಶುಭ ಹಾರೈಸೋಣ...
Kshetra Samachara
07/10/2021 08:15 pm