ಮುಲ್ಕಿ: ಮೆಡಲಿನ್ ಶಿಕ್ಷಣ ಸಂಸ್ಥೆಗಳು (ಬೆಥನಿ ವಿದ್ಯಾಸಂಸ್ಥೆ ಮಂಗಳೂರು) ನೇತೃತ್ವದಲ್ಲಿ ಕಾರ್ಮಿಕ ಇಲಾಖೆ ಮಂಗಳೂರು, ಸಹಮತ ಸಂಸ್ಥೆಗಳ ಹಾಗೂ ಸಹೃದಯಿ ಮನಸ್ಕರ ಸಹಭಾಗಿತ್ವದಲ್ಲಿ ಕಟ್ಟಡ ಕಾರ್ಮಿಕರ ಹಕ್ಕುಗಳನ್ನು ಪ್ರತಿಪಾದಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳ ಜಾಗೃತಿ ಮತ್ತು ನೊಂದಾವಣೆ ಕಾರ್ಯಕ್ರಮ ಮುಲ್ಕಿಯ ಕೆಎಸ್ ರಾವ್ ನಗರ ಸಮುದಾಯ ಭವನದಲ್ಲಿ ನಡೆಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಬೆಥನಿ ಸಂಸ್ಥೆ ಮಂಗಳೂರು ಪ್ರಾಂತ್ಯದ ಸಮಾಜಸೇವಾ ಸಂಯೋಜಕಿ ಭ. ಅನ್ನ ಮರಿಯಾ ಬಿಎಸ್. ಎಂ ಎಸ್ ಡಬ್ಲ್ಯೂ ವಹಿಸಿ ಮಾತನಾಡಿ ಕಟ್ಟಡ ಕಾರ್ಮಿಕರು ನೋಂದಣಿ ಮಾಡಿಸಿಕೊಂಡು ಸರಕಾರದಿಂದ ಸಿಗುವ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಇತರರಿಗೂ ಮಾಹಿತಿ ನೀಡುವ ಮೂಲಕ ಸ್ವಾವಲಂಬಿಗಳಾಗಿ ಭಾರತ ದೇಶ ಪ್ರಗತಿ ಸಾಧಿಸಲಿ ಎಂದರು.
ಮುಲ್ಕಿ ಚರ್ಚ ನ ಧರ್ಮಗುರುಗಳಾದ ಫಾ. ಸಿಲ್ವಸ್ಟರ್ ಡಿಕೋಸ್ತ ಆಶೀರ್ವಚನ ನೀಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಮಂಗಳೂರಿನ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೋ ಮಾತನಾಡಿ ಕಟ್ಟಡ ಕಾರ್ಮಿಕರ ನೋಂದಾವಣಿಗೆ ಬೇಕಾಗುವ ಗುತ್ತಿಗೆದಾರರ ದೃಢೀಕರಣ ಪತ್ರ ಸಹಿತ ಅನೇಕ ಮಾಹಿತಿಗಳನ್ನು ನೀಡಿ ಕೊರೋನಾ ಸಂದಿಗ್ದ ಸ್ಥಿತಿಯಲ್ಲಿ ದ.ಕ.ಜಿಲ್ಲೆಯಲ್ಲಿ ಇದುವರೆಗೆ 64 ಸಾವಿರ ಕಟ್ಟಡ ಕಾರ್ಮಿಕರ ನೋಂದಣಿಯಲ್ಲಿ 53 ಸಾವಿರ ಕಾರ್ಮಿಕರಿಗೆ ಪರಿಹಾರ ಧನ ನೀಡಲಾಗಿದ್ದು ಕಟ್ಟಡ ಕಾರ್ಮಿಕರ ನೋಂದಣಿ ದುರುಪಯೋಗ ಶಿಕ್ಷಾರ್ಹ ಅಪರಾಧವಾಗಿದೆ, ಕೊರೋನಾ ದಿಂದಾಗಿ ಕಟ್ಟಡ ಕಾರ್ಮಿಕರ ನಿವೃತ್ತಿ ವೇತನ ಸ್ಥಗಿತಗೊಂಡಿದ್ದು ಶೀಘ್ರವೇ ಆರಂಭಿಸಲಾಗುವುದು. ಎಂದರು.
ಸಭೆಯಲ್ಲಿ ಕಾರ್ಮಿಕ ಪ್ರಾಣೇಶ್ ಹೆಜಮಾಡಿ ತೆಂಗಿನ ಮರ ಹತ್ತುವ ಕಾರ್ಮಿಕರಿಗೆ ಸೌಲಭ್ಯ ಒದಗಿಸಲು ಒತ್ತಾಯಿಸಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಕಾರ್ನಾಡ್ ಮಾಹಿತಿ ಸೇವಾ ಕೇಂದ್ರದ ಕಾರ್ಯದರ್ಶಿ ಇಬ್ರಾಹಿಂ, ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷರಾದ ಅಶೋಕ್ ಕುಮಾರ್ ಶೆಟ್ಟಿ, ಎಪಿಎಂಸಿ ಮಾಜಿ ಉಪಾಧ್ಯಕ್ಷ ಗುತ್ತಿಗೆದಾರ ಜೋಯಲ್ ಹೆರಾಲ್ಡ್ ಡಿಸೋಜ, ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರತಿಭಾ ಹೆಬ್ಬಾರ್, ಮೆಡಲಿನ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥೆ ಭ. ನಂದಿತಾ ಬಿ ಎಸ್, ಪ್ರಾಂಶುಪಾಲರಾದ ಭ.ಮಾರಿಯೋಲ, ಲ.ವೆಂಕಟೇಶ್ ಹೆಬ್ಬಾರ್, ಶಿವಾನಂದ ಆರ್. ಕೆ. ಉಪಸ್ಥಿತರಿದ್ದರು. ಮೆಡಲಿನ್ ಕಾನ್ವೆಂಟ್ ಮುಖ್ಯಸ್ಥೆ ನಂದಿತಾ ಬಿಎಸ್ ಸ್ವಾಗತಿಸಿದರು. ವಿಶಾಂತ್ ಶೆಟ್ಟಿ ನಿರೂಪಿಸಿದರು ಅಭಿಷೇಕ್ ಧನ್ಯವಾದ ಅರ್ಪಿಸಿದರು. ಬಳಿಕ ಕಟ್ಟಡ ಕಾರ್ಮಿಕರಿಗೆ ವಿವಿಧ ಯೋಜನೆಗಳ ಜಾಗೃತಿ ಮತ್ತು ನೋಂದಣಿ ಕಾರ್ಯಕ್ರಮ ನಡೆಯಿತು.
Kshetra Samachara
29/11/2020 01:54 pm