ಮಂಗಳೂರು: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ‘ಬ್ಯಾರಿ-ಕನ್ನಡ-ಇಂಗ್ಲಿಷ್-ಹಿಂದಿ-ರೋಮನ್' ಲಿಪಿ
ಒಳಗೊಂಡ ಶಬ್ದಕೋಶದ ಬಿಡುಗಡೆ ಮಂಗಳೂರು ತಾಪಂ ಹೊಸ ಕಟ್ಟಡದಲ್ಲಿ ಶನಿವಾರ ನಡೆಯಿತು.
ಶಬ್ದಕೋಶ ಬಿಡುಗಡೆಗೊಳಿಸಿ ಮಾತನಾಡಿದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್,
ಕಳೆದ 11 ವರ್ಷದಲ್ಲಿ ಭಾಷಾ ಅಕಾಡೆಮಿಗಳ ಪೈಕಿ ಬ್ಯಾರಿ ಸಾಹಿತ್ಯ ಅಕಾಡೆಮಿ ಅನೇಕ ಮಹತ್ವದ ಕಾರ್ಯ ಮಾಡುತ್ತಾ ಬಂದಿದೆ. ಬ್ಯಾರಿಯೇತರರಿಗೆ ಬ್ಯಾರಿ ಭಾಷೆ ಕಲಿಯಲು ಹೊಸ ಮಾದರಿ ಶಬ್ದಕೋಶ ಹೊರತಂದಿರುವುದು ಶ್ಲಾಘನೀಯ. ಇತ್ತೀಚೆಗಷ್ಟೇ ಅಕಾಡೆಮಿಯು ಹೊಸ ಬ್ಯಾರಿ ಲಿಪಿ ರಚಿಸಿರುವುದು ಕೂಡ ಉತ್ತಮ ಬೆಳವಣಿಗೆ ಎಂದರು. ಅಖಿಲ ಭಾರತ ಬ್ಯಾರಿ ಪರಿಷತ್ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ಸೂರಲ್ಪಾಡಿ ಉದ್ಘಾಟಿಸಿದರು. ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ಶಬ್ದಕೋಶ ಕೃತಿ ಮಾರ್ಗದರ್ಶಕ ಪುತ್ತೂರು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಸ್ಟೀವನ್ ಕ್ವಾಡ್ರಸ್ ಮತ್ತು ಸಂತ ಅಲೋಶಿಯಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಅಲ್ವಿನ್ ಡೇಸಾ ಅವರನ್ನು ಸನ್ಮಾನಿಸಲಾಯಿತು. ಅತಿಥಿಗಳಾಗಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಎಸ್.ಬಿ. ಅಪ್ಪಾಜಿ ಗೌಡ ಭಾಗವಹಿಸಿದ್ದರು. ಬ್ಯಾರಿ ಭಾಷಾ ದಿನಾಚರಣೆ ಬಗ್ಗೆ ಮಾತನಾಡಿದ ಉಪನ್ಯಾಸಕ ಅಬ್ದುಲ್ ರಝಾಕ್ ಅನಂತಾಡಿ, ಬ್ಯಾರಿ ಭಾಷೆಯಲ್ಲಿ ಸಾಕಷ್ಟು ಕೆಲಸಗಳಾಗುತ್ತಿದ್ದರೂ ಕೂಡ ಯುನೆಸ್ಕೋ ಪಟ್ಟಿಯಲ್ಲಿ ಇನ್ನೂ ಬ್ಯಾರಿ ಭಾಷೆ ಸೇರ್ಪಡೆ ಆಗಿಲ್ಲ. ಈ ನಿಟ್ಟಿನಲ್ಲಿ ಸಮುದಾಯದ ನಾಯಕರು ಪ್ರಯತ್ನ ನಡೆಸಬೇಕು ಎಂದರು. ರಿಜಿಸ್ಟ್ರಾರ್ ಪೂರ್ಣಿಮಾ ಬ್ಯಾರಿ ಭಾಷೆಯಲ್ಲೇ ಸ್ವಾಗತಿಸಿ, ಭಾಷಾ ದಿನಾಚರಣೆಯ ಹಿರಿಮೆ ಹೆಚ್ಚಿಸಿದರು. ಅಕಾಡೆಮಿ ಸದಸ್ಯರಾದ ಶಂಶೀರ್ ಬುಡೋಳಿ, ರಾಧಾಕೃಷ್ಣ ನಾವಡ ಉಪಸ್ಥಿತರಿದ್ದರು.
Kshetra Samachara
21/11/2020 09:05 pm