ಉಡುಪಿ: ಬುಧವಾರ ಮಂಗಳೂರಿನಿಂದ ಮುಂಬಯಿಗೆ ತೆರಳುತಿದ್ದ ಮತ್ಸ್ಯಗಂಧ ಎಕ್ಸ್‌ಪ್ರೆಸ್ ರೈಲಿನಲ್ಲಿ ಯಾವುದೇ ಟಿಕೇಟ್ ಇಲ್ಲದೇ ಪ್ರಯಾಣಿಸುತಿದ್ದ ಕೇರಳದ ಐವರು ಯುವಕರಿಗೆ ಉಡುಪಿಯ ಜೆಎಂಎಫ್‌ಸಿ ನ್ಯಾಯಾಲಯ ತಲಾ ೧೧೦೦ರೂ. ದಂಡ ಹಾಗೂ ಒಂದು ತಿಂಗಳ ಸಾದಾ ಜೈಲು ಶಿಕ್ಷೆಯನ್ನು ವಿಧಿಸಿದ್ದು, ದಂಡ ಪಾವತಿಸದಿದ್ದರೆ ಇನ್ನೂ ಒಂದು ತಿಂಗಳು ಜೈಲಿನಲ್ಲಿರುವಂತೆ ಸೂಚಿಸಿ ತೀರ್ಪು ನೀಡಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.
ಐವರು ಯುವಕರು ಕೇರಳ ರಾಜ್ಯದವರಾಗಿದ್ದು, ಗೋವಾಕ್ಕೆ ಪ್ರವಾಸ ಕೈಗೊಂಡಿದ್ದರು. ಮಧ್ಯಾಹ್ನದ ರೈಲಿನಲ್ಲಿ ಮಂಗಳೂರಿನಿಂದ ಟಿಕೇಟ್ ಇಲ್ಲದೇ ಪ್ರಯಾಣಿಸುತಿದ್ದ ಇವರು, ಟಿಕೇಟ್ ಕೇಳಿದ ಟಿಸಿಗೆ ದಬಾಯಿಸಿದಲ್ಲದೇ ರೈಲಿನಲ್ಲಿ ನ್ಯೂಸೆನ್ಸ್ ಸೃಷ್ಟಿದ್ದರೆಂದು ಬಂದ ಮಾಹಿತಿಯಂತೆ ರೈಲ್ವೆ ಪೊಲೀಸ್ ಪಡೆಯ (ಆರ್‌ಪಿಎಫ್) ಎಎಸ್‌ಐ ಸುಧೀರ್ ಶೆಟ್ಟಿ ಹಾಗೂ ಮಹಿಳಾ ಕಾನ್‌ಸ್ಟೇಬಲ್ ಝೀನಾ ಪಿಂಟೊ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಎಲ್ಲಾ ಐವರನ್ನು ವಶಕ್ಕೆ ಪಡೆದು ವಿಚಾರಣೆಗಾಗಿ ಉಡುಪಿ ಆರ್‌ಪಿಎಫ್ ಕಚೇರಿಗೆ ಕರೆದುಕೊಂಡು ಹೋಗಿದ್ದರು.
ಆರ್‌ಪಿಎಫ್ ಕಚೇರಿಯಲ್ಲಿ ಮತ್ತಷ್ಟು ಕೆಟ್ಟದ್ದಾಗಿ ವರ್ತಿಸಿದ ಐವರು ವಿದ್ಯಾರ್ಥಿಗಳು, ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಕೆಟ್ಟ ಪದಗಳಿಂದ ಹರಿಹಾಯ್ದರೆಂದು ಹೇಳಲಾಗಿದೆ. ಇದರಿಂದ ಪೊಲೀಸರು ಐವರ ವಿರುದ್ಧ ಆರ್‌ಸಿ ಕಾಯ್ದೆಯಡಿ ಮೊಕದ್ದಮೆಯನ್ನು ದಾಖಲಿಸಿದ್ದಲ್ಲದೇ ಎಲ್ಲರನ್ನೂ ಉಡುಪಿಯ ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು.ವಿಚಾರಣೆ ನಡೆಸಿದ ನ್ಯಾಯಾಧೀಶರು ಐವರ ವಿರುದ್ಧ ಟಿಕೇಟ್ ರಹಿತ ಪ್ರಯಾಣಕ್ಕಾಗಿ ತಲಾ 1000ರೂ. ದಂಡ ಹಾಗೂ ಕೆಟ್ಟ ವರ್ತನೆಗಾಗಿ ತಲಾ 100ರೂ.ನಂತೆ ದಂಡ ವಿಧಿಸಿದರು. ಆರೋಪಿಗಳು ದಂಡ ಕಟ್ಟಲು ವಿಫಲರಾಗಿದ್ದರಿಂದ, ಎಲ್ಲರನ್ನೂ ತಪ್ಪಿತಸ್ಥರೆಂದು ಘೋಷಿಸಿದ ನ್ಯಾಯಾಲಯ 30ದಿನಗಳ (ಒಂದು ತಿಂಗಳ) ಸಾದಾ ಜೈಲು ಶಿಕ್ಷೆ ಹಾಗೂ ತಲಾ 1000ರೂ. ದಂಡ ವಿಧಿಸಿ ತೀರ್ಪು ನೀಡಿತು. ಒಂದು ತಿಂಗಳೊಳಗೆ ದಂಡ ಪಾವತಿಸಲು ವಿಫಲರಾದರೆ, ಜೈಲು ಶಿಕ್ಷೆಯನ್ನು ಇನ್ನೂ ಒಂದು ತಿಂಗಳಿಗೆ ವಿಸ್ತರಿಸುವಂತೆ ಸೂಚನೆ ನೀಡಿತು ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಮೋಜಿನ ಪ್ರವಾಸಕ್ಕೆಂದು ಹೊರಟು ಶಿಕ್ಷೆಗೊಳಗಾದ ಐವರು ಯುವಕರನ್ನು ಜುನೈದ್ (24), ಸುಜಿತ್ (23), ವಿಷ್ಣು (24), ಯೂನಿಸ್ (24) ಹಾಗೂ ಮಿಸ್ಬಾ (24) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಕಲ್ಲಿಕೋಟೆ ಜಿಲ್ಲೆಯ ಥರಿಯಾದ್ ಕಟ್ಟಿಪಾರಾದವರೆಂದು ತಿಳಿದುಬಂದಿದೆ.
PublicNext
13/10/2022 08:43 pm