ಉಡುಪಿ: ಆನ್‌ಲೈನ್ ವಂಚನೆಯಲ್ಲಿ ಹೊಸ ಹೊಸ ಆವಿಷ್ಕಾರಗಳಾಗುತ್ತಿವೆ. ಮೋಸ ಮಾಡುವವರು ಹೆಚ್ಚಾಗುತ್ತಿದ್ದಂತೆ, ಮೋಸ ಹೋಗುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇಂತಹುದೇ ಆನ್ ಲೈನ್ ವಂಚನೆಯಿಂದ ಉಡುಪಿಯ ಮಂದಾರ್ತಿ ಮೂಲದ ಉದ್ಯಮಿಯೊಬ್ಬರು ಮೂರು ಲಕ್ಷ ಹಣ ಕಳೆದುಕೊಂಡಿದ್ದಾರೆ.
ಮಗನ ಚಿಕಿತ್ಸೆಗೆ ಅರ್ಜೆಂಟಾಗಿ ಹಣ ಬೇಕು ಎಂದು ಹೇಳಿ ವಂಚನೆ ಮಾಡುವ ತಂಡವೊಂದು ಇದೀಗ ಕಾರ್ಯಾಚರಣೆಗಿಳಿದಿದೆ. ಅನಾಮಧೇಯ ವ್ಯಕ್ತಿಯೊಬ್ಬ ಯುರೋ ಬಾಂಡ್ ಕಂಪನಿಯ ಮಾಲೀಕನೆಂದು ಹೇಳಿ ಯುರೋ ಬಾಂಡ್ ಡೀಲರ್ ಆಗಿರುವ ಮಂದಾರ್ತಿಯ ಉದ್ಯಮಿಯೊಬ್ಬರಿಗೆ ಕರೆ ಮಾಡಿ, ತನ್ನ ಮಗ ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾನೆ. ಮಗನನ್ನು ಮಂಗಳೂರಿನ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲು ತುರ್ತಾಗಿ 3 ಲಕ್ಷ ರೂ. ಹಣವನ್ನು ಖಾತೆಗೆ ಕಳುಹಿಸಿ ಕೊಡುವಂತೆ ಕೇಳಿಕೊಂಡಿದ್ದ. ಇದಕ್ಕೆ ಸ್ಪಂದಿಸಿದ ಉದ್ಯಮಿ ತನ್ನ ಹಾಗೂ ಸ್ನೇಹಿತರ ಖಾತೆಯಿಂದ ಒಟ್ಟು 3 ಲಕ್ಷ ರೂ. ಹಣವನ್ನು ಆನ್‌ಲೈನ್ ಮೂಲಕ ವರ್ಗಾಯಿಸಿದ್ದರು. ನಂತರ ಅನುಮಾನಗೊಂಡು ಯುರೋ ಬಾಂಡ್ ಕಂಪನಿಗೆ ಸಂಪರ್ಕಿಸಿ ಮಾಹಿತಿ ಪಡೆದಾಗ ಉದ್ಯಮಿ ಮೋಸ ಹೋಗಿರುವುದು ತಿಳಿದುಬಂತು.
ಪ್ರಮೋದ್ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ವಂಚಕನ ನಂಬರ್ ಟ್ರೇಸ್ ಮಾಡಿದಾಗ, ಗುಜರಾತ್ ರಾಜ್ಯದ ಸೂರತ್ ಪ್ರದೇಶದಲ್ಲಿ ತೋರಿಸುತ್ತಿತ್ತು. ಅವನು ಮಹಾರಾಷ್ಟ್ರ ಥಾಣೆ ಮೂಲದ ವ್ಯಕ್ತಿಯೊಬ್ಬನ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ತಿಳಿದುಬಂತು. ಪೊಲೀಸ್ ತಂಡ, ಮಹಾರಾಷ್ಟ್ರಕ್ಕೆ ತೆರಳಿ ಆನ್ ಲೈನ್ ವಂಚನೆ ಮಾಡಿದ ವಂಚಕ ಹಾಗೂ ಆತನ ಜೊತೆಗೆ ಇದ್ದ ಇಬ್ಬರನ್ನು ವಶಕ್ಕೆ ಪಡೆದು ಉಡುಪಿಗೆ ಕರೆ ತಂದಿದ್ದಾರೆ.
ಹೀಗೆ ವಂಚಕರು ಹೊಸ ಹೊಸ ಆನ್ ಲೈನ್ ವಂಚನೆಗಳ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಈ ಸಂಬಂಧ ಉಡುಪಿ ಪೊಲೀಸರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು ಅನಾಮಧೇಯ ಕರೆ ಅಥವಾ ಎಸ್ ಎಂಎಸ್ ಅಥವಾ ವಾಟ್ಸಾಪ್ ಮೆಸೇಜ್ ಗಳಿಗೆ ಸ್ಪಂದಿಸಬೇಡಿ ಎಂದು ಮನವಿ ಮಾಡಿದ್ದಾರೆ.
-ರಹೀಂ ಉಜಿರೆ, ಪಬ್ಲಿಕ್ ನೆಕ್ಸ್ಟ್, ಉಡುಪಿ
PublicNext
18/09/2022 08:32 am