ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಳ್ಳಾಲ: ಮರಳು ಮಾಫಿಯದಿಂದ ಸಿಸಿಟಿವಿ ಧ್ವಂಸ ಕೇಸ್‌; ನಾಲ್ವರ ಬಂಧನ

ಉಳ್ಳಾಲ: ಸೋಮೇಶ್ವರ ದೇವಸ್ಥಾನದ ರಥಬೀದಿಯ ಕಡಲ ಕಿನಾರೆಯಲ್ಲಿ ಮರಳು ಕಳ್ಳತನ ತಡೆಯಲು ಜಿಲ್ಲಾಡಳಿತದಿಂದ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾವನ್ನು ಧ್ವಂಸಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾಲ್ವರು ಆರೋಪಿಗಳನ್ನು ಇಂದು ತರಾತುರಿಯಲ್ಲಿ ಬಂಧಿಸಿದ ಉಳ್ಳಾಲ ಪೊಲೀಸರು ಅಂಗೈ ಹುಣ್ಣಿಗೆ ಮುಲಾಮು ಹಚ್ಚಿದರೇ ಎಂಬ ಸಂದೇಹ ಸಾರ್ವಜನಿಕರಲ್ಲಿ ಮೂಡುವಂತಾಗಿದೆ.

ಮಡ್ಯಾರು ಸಾಯಿನಗರ ನಿವಾಸಿ ಸೂರಜ್, ಕುರ್ನಾಡು ಮುಡಿಪು ಮದ್ಯನಡ್ಕ ನಿವಾಸಿ ಇಕ್ಬಾಲ್, ತಲಪಾಡಿ ನಿವಾಸಿ ಅಖಿಲ್ ಹಾಗೂ ಸೋಮೇಶ್ವರ ಮೂಡ ನಿವಾಸಿ ಪ್ರಜ್ವಲ್ ಎಂಬ ಆರೋಪಿಗಳನ್ನ ಇಂದು ಉಳ್ಳಾಲ ಪೊಲೀಸರು ಬಂಧಿಸಿದ್ದು, ಸಿಸಿಟಿವಿ ಪುಡಿಗೈದ ಟಿಪ್ಪರನ್ನ ಜಪ್ತಿಗೊಳಿಸಿದ್ದಾರೆ.

ಸಾರ್ವಜನಿಕ ಆಸ್ಥಿಯಾದ ಸಿಸಿಟಿವಿ ಕ್ಯಾಮೆರಾವನ್ನ ಮರಳು ಕಳ್ಳರು ಧ್ವಂಸಗೈದು ಅಟ್ಟಹಾಸ ಮೆರೆದ ಎರಡು ದಿನಗಳ ಬಳಿಕ ಉಳ್ಳಾಲ ಕಂದಾಯ ನಿರೀಕ್ಷಕರಾದ ಮಂಜುನಾಥ್ ಅವರು ತಡವಾಗಿ ಇಂದು ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಮಂಜುನಾಥ್ ಅವರ ದೂರು ದಾಖಲಿಸಿಕೊಂಡ ಉಳ್ಳಾಲ ಠಾಣಾ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ತರಾತುರಿಯಲ್ಲಿ ಬಂಧಿಸಿದ್ದಾರೆ.

ಕಳೆದ ಶನಿವಾರ ಮುಂಜಾನೆ ನಸುಕಿನ ವೇಳೆ ಸೋಮೇಶ್ವರ ದೇವಸ್ಥಾನದ ರಥಬೀದಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯನ್ನು ಆರೋಪಿಗಳು ಟಿಪ್ಪರ್ ಲಾರಿಯನ್ನ ಹಿಮ್ಮುಖವಾಗಿ ಚಲಾಯಿಸಿ ಧ್ವಂಸಗೊಳಿಸಿದ್ದರು. ಇಷ್ಟೇ ಅಲ್ಲದೆ ಪಕ್ಕದ ಸೋಮೇಶ್ವರ ಮೂಡ ಲೇ ಔಟ್‌ನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಮರಳು ಕಳ್ಳತನ ತಡೆಯಲು ಹಾಕಿದ್ದ ತಂತಿ ತಡೆ ಬೇಲಿಯನ್ನು ಮರಳು ಕಳ್ಳರು ಧ್ವಂಸಗೈದಿದ್ದರು.

ಕಳೆದ ಎರಡು ವರುಷಗಳಿಂದಲೂ ಅಂಗೈ ಅಗಲದಲ್ಲಿ ಮರಳು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದ್ದರೂ ಸಹ ಅಧಿಕಾರಿಗಳು ಮತ್ತು ಉಳ್ಳಾಲ ಪೊಲೀಸರು ಏನೂ ಗೊತ್ತಿಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದು,ಇದೀಗ ಸಿಸಿಟಿವಿ ಧ್ವಂಸ ಪ್ರಕರಣ ರಾಜ್ಯ ಮಟ್ಟದ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತು ಅಂಗೈ ಹುಣ್ಣಿಗೆ ಮುಲಾಮು ಹಚ್ಚುವ ಕೆಲಸ ಮಾಡಿದ್ದಾರೆಂಬ ಆರೋಪ ಕೇಳಿ ಬಂದಿದೆ.

Edited By : Shivu K
PublicNext

PublicNext

13/09/2022 12:58 pm

Cinque Terre

51.77 K

Cinque Terre

1

ಸಂಬಂಧಿತ ಸುದ್ದಿ