ವರದಿ: ರಹೀಂ ಉಜಿರೆ
ಕುಂದಾಪುರ : ರಾಜ್ಯದಲ್ಲಿ ಯುವ ಸಮೂಹ ಒಂದಲ್ಲೊಂದು ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿ ಸಂಗತಿ.ಪರೀಕ್ಷೆಯಲ್ಲಿ ಫೇಲ್ ,ಪ್ರೇಮ ವೈಫಲ್ಯ, ಹೆತ್ತವರು ಬೈದಿದ್ದಕ್ಕೆ- ಹೊಡೆದಿದ್ದಕ್ಕೆ, ನಿರುದ್ಯೋಗ ,ವ್ಯವಹಾರದಲ್ಲಿ ನಷ್ಟ ಹೀಗೆ ಹಲವು ಕಾರಣಗಳಿಂದ ಯುವ ಸಮೂಹ ಅತ್ಮಹತ್ಯೆಗೆ ಶರಣಾಗುತ್ತಿದೆ.
ಇಂದು ಕುಂದಾಪುರದಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕನಿಗೆ ಇನ್ನೂ ಇಪ್ಪತ್ತರ ಆಸುಪಾಸು. ನೀಟ್ ಪರೀಕ್ಷೆ ಫಲಿತಾಂಶ ಬಂದಿದ್ದು, ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಹಿನ್ನಲೆಯಲ್ಲಿ ಈ ವಿದ್ಯಾರ್ಥಿ ಮನನೊಂದು ಸೇತುವೆಯಿಂದ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಕುಂದಾಪುರ ತಾಲೂಕಿನ ಹೇರಿಕುದ್ರು ಬಳಿ ರಾಷ್ಟ್ರೀಯ ಹೆದ್ದಾರಿ 66ರ ಸೇತುವೆ ಬಳಿ ತನ್ನ ಸೈಕಲ್ ನಿಲ್ಲಿಸಿ ಈ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕುಂದಾಪುರದ ವಡೇರಹೋಬಳಿ ಜೆ.ಎಲ್.ಬಿ ರಸ್ತೆ ನಿವಾಸಿ ರಘುವೀರ್ ಶೆಟ್ಟಿ ಎಂಬುವರ ಮಗ ಸಾಯೀಶ್ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಶಿವಮೊಗ್ಗದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಾಯೀಶ್ ಶೆಟ್ಟಿ ನೀಟ್ ಪರೀಕ್ಷೆ ಬರೆದಿದ್ದ. ಫಲಿತಾಂಶ ನೋಡುವ ಸಲುವಾಗಿ ಇಂದು ಬೆಳಿಗ್ಗೆ ಸೈಕಲ್ ತೆಗೆದುಕೊಂಡು ಸೈಬರ್ ಹೋಗಿದ್ದ ಸಾಯೀಶ್ ಗೆ 140 ಅಂಕ ಬಂದಿದ್ದ ಹಿನ್ನಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗುತ್ತಿದೆ.
ಮೊದಲು, ಕುಂದಾಪುರದ ಸಂಗಮ್ ಬ್ರಿಡ್ಜ್ ಬಳಿ ಬಂದಿದ್ದ ಸಾಯೀಶ್ ಸೈಕಲ್ ಮತ್ತು ಮೊಬೈಲ್ ಬದಿಗಿಟ್ಡು ಹೊಳೆಗೆ ಹಾರಿದ್ದನ್ನು ಗಮನಿಸಿದ ಸ್ಥಳೀಯರು ಪೊಲೀಸ್ ಮತ್ತು ಆಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ವಿದ್ಯಾರ್ಥಿಯ ಶವಕ್ಕಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾಡಳಿತ ಮತ್ತು ಸ್ಥಳೀಯಾಡಳಿತಗಳು ಇಂತಹ ಅನ್ಯಾಯದ ಸಾವು ಏಕೆ ಸಂಭವಿಸುತ್ತಿದೆ ಎಂಬ ಬಗ್ಗೆ ವಿಶೇಷ ಅಧ್ಯಯನ ನಡೆಸಬೇಕಾಗಿದೆ.ವಿದ್ಯಾರ್ಥಿಗಳು ಮತ್ತು ಯುವ ಸಮೂಹವನ್ನು ಆತ್ಮಹತ್ಯೆ ಕೃತ್ಯಗಳಿಂದ ದೂರ ಇರುವಂತೆ ಮಾಡಲು ಕಾರ್ಯಕ್ರಮ ರೂಪಿಸಬೇಕಿದೆ.
PublicNext
08/09/2022 10:12 pm