ಉಳ್ಳಾಲ: ನಗರಸಭೆಯ ವತಿಯಿಂದ ಸರಬರಾಜು ಮಾಡುವ ನೀರನ್ನ ತನ್ನ ಮನೆಗೆ ಏಕೆ ಪೂರೈಸಿಲ್ಲ ಎಂದು ಪ್ರಶ್ನಿಸಿದ ಯುವಕನೊಬ್ಬನಿಗೆ ನೀರಿನ ಟ್ಯಾಂಕರ್ ಚಾಲಕ ಚೂರಿಯಿಂದ ಇರಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಮೇಲಂಗಡಿ ಬಳಿ ನಡೆದಿದೆ.
ಬಬ್ಬುಕಟ್ಟೆ ನಿವಾಸಿ ರಿಜ್ವಾನ್(24) ಚೂರಿ ಇರಿತಕ್ಕೊಳಗಾದವರು. ಟ್ಯಾಂಕರ್ ಚಾಲಕ ಬಸ್ತಿಪಡ್ಪು ನಿವಾಸಿ ಖಲೀಲ್ ಚೂರಿಯಿಂದ ಇರಿದ ಆರೋಪಿ.
ರಿಜ್ವಾನ್ ಮನೆಗೆ ಟ್ಯಾಂಕರ್ ಚಾಲಕ ಖಲೀಲ್ ನೀರು ಸರಬರಾಜು ಮಾಡಿರದ ವಿಚಾರ ಮುಂದಿಟ್ಟು ರಿಜ್ವಾನ್‌ರವರ ತಾಯಿ ಖಲೀಲ್ ನನ್ನ ತರಾಟೆಗೆ ತೆಗೆದಿದ್ದರು. ಈ ವೇಳೆ ಖಲೀಲ್ ರಿಜ್ವಾನ್‌ರವರ ತಾಯಿಗೆ ಅಸಭ್ಯವಾದ ರೀತಿಯಲ್ಲಿ ಬೈಯ್ದು ಬಳಿಕ ನೀರು ಸರಬರಾಜು ಮಾಡಿ ಹೋಗಿದ್ದನಂತೆ. ಇದೇ ಘಟನೆಗೆ ಸಂಬಂಧಿಸಿ ನಿನ್ನೆ (ಶುಕ್ರವಾರ) ಸಂಜೆ ವೇಳೆ ರಿಜ್ವಾನ್ ಮೇಲಂಗಡಿಯಲ್ಲಿ ಖಲೀಲ್‌ನಲ್ಲಿ ವಿಚಾರಿಸಿದ್ದಾನೆ. ಈ ಸಂದರ್ಭ ಇವರಿಬ್ಬರ ನಡುವೆ ಮಾತಿಗೆ ಮಾತು ಬೆಳೆದು ಕುಪಿತಗೊಂಡ ಟ್ಯಾಂಕರ್ ಚಾಲಕ ಖಲೀಲ್ ರಿಜ್ವಾನ್‌ನ ಬೆನ್ನಿಗೆ ಚೂರಿಯಿಂದ ಇರಿದಿದ್ದಾನೆ ಎಂದು ತಿಳಿದು ಬಂದಿದೆ.
ಘಟನೆಯಿಂದ ಗಾಯಗೊಂಡ ರಿಜ್ವಾನ್ ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ರಿಜ್ವಾನ್ ಜತೆಗಿದ್ದ ಸೈಫುದ್ದೀನ್ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
30/04/2022 09:28 am