ವರದಿ: ರಹೀಂ ಉಜಿರೆ
ಮಲ್ಪೆ: ನಿನ್ನೆ ಕೃಷ್ಣನಗರಿಯ ಪ್ರಸಿದ್ಧ ಪ್ರವಾಸಿ ತಾಣ ಸೈಂಟ್ ಮೇರಿಸ್ ನಲ್ಲಿ ದೊಡ್ಡ ದುರಂತ ಸಂಭವಿಸಿತ್ತು. ಕೇರಳದ ಕೊಟ್ಟಾಯಂ ನಿಂದ ಬಂದಿದ್ದ ವಿದ್ಯಾರ್ಥಿಗಳ ತಂಡದಲ್ಲಿದ್ದ ಮೂವರು ನೀರು ಪಾಲಾಗಿದ್ದರು. ಹಾಗಂತ ಇದು ಇಲ್ಲಿ ನಡೆಯುತ್ತಿರುವ ಮೊದಲನೇ ದುರಂತವೇನಲ್ಲ.ಈ ಹಿಂದೆ ಕೂಡ ಹಲವು ಬಾರಿ ವಿದ್ಯಾರ್ಥಿಗಳು ಮತ್ತು ಯುವಕರು ಇಲ್ಲಿ ಪ್ರಾಣ ತೆತ್ತಿದ್ದಾರೆ.
ನಿನ್ನೆ ಕೊಟ್ಟಾಯಂನ ಮಂಗಳ ಎಂಜಿನಿಯರಿಂಗ್ ಕಾಲೇಜಿನ 42 ಮಂದಿ ವಿದ್ಯಾರ್ಥಿಗಳ ತಂಡ ದ್ವೀಪದಲ್ಲಿ ವಿಹರಿಸುತ್ತಿತ್ತು.ಆದರೆ ಈ ಮೂವರು ನತದೃಷ್ಟ ವಿದ್ಯಾರ್ಥಿಗಳು ಪ್ರತ್ಯೇಕವಾಗಿ ದ್ವೀಪದ ಪಶ್ಚಿಮ ದಿಕ್ಕಿನಲ್ಲಿರುವ ಕಲ್ಲಿನ ಮೇಲೆ ಹೋಗಿದ್ದಾರೆ. ಅಲ್ಲಿ ಸೆಲ್ಫಿ ತೆಗೆಯುತ್ತಿದ್ದ ಸಂದರ್ಭ ಓರ್ವ ವಿದ್ಯಾರ್ಥಿ ಜಾರಿ ನೀರಿಗೆ ಬಿದ್ದಿದ್ದಾನೆ. ಅವನನ್ನು ರಕ್ಷಿಸಲು ಹೋದ ಮತ್ತಿಬ್ಬರು ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಸೈಂಟ್ ಮೇರಿಸ್ ನ ದಕ್ಷಿಣ ಭಾಗದ ಸಮುದ್ರತೀರ ಅಪಾಯಕಾರಿಯಾಗಿದ್ದು ಅಲ್ಲಿಗೆ ಹೋಗಬಾರದು ಎಂದು ಎಚ್ಚರಿಕೆ ಫಲಕ ಹಾಕಲಾಗಿದೆ. ಆದರೂ ಅದನ್ನು ಲೆಕ್ಕಿಸದೆ ವಿದ್ಯಾರ್ಥಿಗಳು ಅಲ್ಲಿಗೆ ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ.
ಇದೀಗ ಬೇಸಿಗೆ ರಜೆ ಚಾಲ್ತಿಯಲ್ಲಿದೆ.ರಾಜ್ಯದೆಲ್ಲೆಡೆಯಿಂದ ಪ್ರವಾಸಿಗರು ಈ ಪುಟ್ಟ ದ್ವೀಪದತ್ತ ಬರುತ್ತಿದ್ದಾರೆ.ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆ ದೃಷ್ಟಿಯಿಂದ ಸಾಕಷ್ಟು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.ಇಲ್ಲ ಮಲ್ಪೆ ಅಭಿವೃದ್ಧಿ ಸಮಿತಿ ಇದೆ.ಬೀಚ್ ಮತ್ತು ದ್ವೀಪದ ನಿರ್ವಹಣೆಯನ್ನು ಈ ಸಮಿತಿ ನೋಡಿಕೊಳ್ಳುತ್ತಿದೆ. ಸೈಂಟ್ ಮೇರಿಸ್ ಗೆ ಬೋಟ್ ಮೂಲಕ ಹೋಗುವವರಿಗೆ ಕಡ್ಡಾಯವಾಗಿ ಜಾಕೆಟ್ ಹಾಕುವುದು ,ದ್ವೀಪದಲ್ಲಿ ಕಾವಲುಗಾರರನ್ನು ನೇಮಿಸುವುದು, ವಿದ್ಯಾರ್ಥಿಗಳ ತಂಡ ಬಂದಾಗ ವಿಶೇಷ ಗಮನ ಹರಿಸುವ ಕೆಲಸವನ್ನು ಮಾಡುವುದು.ಈ ಎಲ್ಲಾ ಕ್ರಮಗಳನ್ನು ಮಲ್ಪೆ ಅಭಿವೃದ್ಧಿ ಸಮಿತಿ ಮಾಡಬೇಕಾಗಿದೆ. ಇಲ್ಲದಿದ್ದಲ್ಲಿ ಯುವಜನತೆ ಇದೇ ರೀತಿ ಪ್ರಾಣ ಕಳೆದುಕೊಳ್ಳುತ್ತಲೇ ಇರಬೇಕಾಗುತ್ತದೆ.
Kshetra Samachara
08/04/2022 01:42 pm