ಮಂಗಳೂರು: ದುಬಾರಿ ವಾಚ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ವಿಚಾರಣೆಗೆ ಬಂದಿದ್ದ ಪೊಲೀಸ್ ಸಿಬ್ಬಂದಿಗೆ ಚೂರಿ ಇರಿದು ಪರಾರಿಯಾಗಿದ್ದ ದುಷ್ಕರ್ಮಿಯನ್ನು ಕೊಣಾಜೆ ಠಾಣಾ ಪೊಲೀಸರು ಪತ್ತೆ ಹಚ್ಚಿದ್ದಾರೆ. ಈ ಸಂದರ್ಭ ಮತ್ತೆ ಆರೋಪಿ ಪೊಲೀಸರಿಗೆ ಹಲ್ಲೆ ನಡೆಸಿ ಪರಾರಿಯಾದರೂ ಆತನನ್ನು ಹೆಡೆಮುರಿಕಟ್ಟಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ನಾಸಿರ್ ಬಂಧಿತ ಆರೋಪಿ. ಆರೋಪಿಗಳಾದ ನಾಸಿರ್ ಮತ್ತು ಸಿದ್ದೀಕ್ ಫೆ.21ರಂದು ವಾಚ್ ಮಳಿಗೆಯಲ್ಲಿ ದುಬಾರಿ ವಾಚ್ ಮಾರಾಟಕ್ಕೆ ಯತ್ನಿಸಿದ್ದಾರೆ. ಈ ಬಗ್ಗೆ ಅನುಮಾನಗೊಂಡ ಮಳಿಗೆಯವರು ಉತ್ತರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಆರೋಪಿಗಳನ್ನು ವಿಚಾರಣೆ ಮಾಡಿದ್ದಾರೆ. ಆಗ ಆರೋಪಿ ಪೊಲೀಸ್ ಸಿಬ್ಬಂದಿಗೆ ಮಾರಕಾಸ್ತ್ರದಿಂದ ಚುಚ್ಚಿ ಪರಾರಿಯಾಗಿದ್ದಾನೆ.
ಘಟನೆಯ ಬಗ್ಗೆ ಬಂದರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದರು.
ಇಂದು ಬೆಳಗ್ಗೆ ಆರೋಪಿಗಳಲ್ಲೋರ್ವ ನಾಸಿರ್ ಎಂಬಾತ ಪಜೀರು ಗ್ರಾಮದ ಅರ್ಕಾನ ಎಂಬಲ್ಲಿ ಇದ್ದಾನೆಂಬ ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಕೊಣಾಜೆ ಪೊಲೀಸರು ದಾಳಿ ನಡೆಸಿದ್ದಾರೆ. ಆಗಲೂ ಆರೋಪಿ ಎಎಸ್ ಐ ಶರಣಪ್ಪನವರಿಗೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ.
ಆದರೆ ಪೊಲೀಸರು ಆತನನ್ನು ಹೆಡೆಮುರಿಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೋರ್ವ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
Kshetra Samachara
24/03/2022 10:46 pm