ಗಂಗೊಳ್ಳಿ:ವ್ಯಕ್ತಿಯೊಬ್ಬರ ವಿರುದ್ಧ ಸುಳ್ಳು ಹೇಳಿಕೆ ನೀಡುವಂತೆ ಪೊಲೀಸರೇ ನನ್ನನ್ನು ಒತ್ತಾಯಿಸುತ್ತಿದ್ದು ಇದರಿಂದ ನಾನು ಮಾನಸಿಕವಾಗಿ ದೌರ್ಜನ್ಯ ಅನುಭವಿಸುತ್ತಿದ್ದೇವೆ ಎಂದು ತ್ರಾಸಿಯ ಫ್ರಾನ್ಸಿಸ್ ಅಲ್ಮೇಡಾ ದೂರಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ತ್ರಾಸಿಯ ಫ್ರಾನ್ಸಿಸ್ ಅಲ್ಮೇಡಾ, ‘ಗೆಳೆಯ ಗಂಗೊಳ್ಳಿಯ ಮುಹಮ್ಮದ್ ಇಬ್ರಾಹಿಂಗೆ ಉಚಿತವಾಗಿ ಸಾಕಲು ನೀಡಿದ ದನವನ್ನು ಆತ ಕದ್ದುಕೊಂಡು ಹೋಗಿರುವುದಾಗಿ ಹೇಳಿಕೆ ನೀಡುವಂತೆ ಗಂಗೊಳ್ಳಿ ಎಸ್ಸೈ ನಂಜ ನಾಯ್ಕ ನಿರಂತರ ಕಿರುಕುಳ ನೀಡಿದ್ದು, ಇದಕ್ಕೆ ಒಪ್ಪದಿದ್ದ ಕಾರಣಕ್ಕೆ ನನ್ನ ಮೇಲೆ ಸುಳ್ಳು ಕೇಸು ದಾಖಲಿಸಿ ಜೈಲಿಗೆ ಹಾಕಿದರು. ಈ ರೀತಿ ನನಗೆ ಅನ್ಯಾಯ ಮಾಡಿರುವ ಗಂಗೊಳ್ಳಿ ಎಸ್ಸೈ ನಂಜ ನಾಯ್ಕ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಹೈನುಗಾರಿಕೆ ಹಾಗೂ ಇಲೆಕ್ಟ್ರಿಶಿಯನ್ ವೃತ್ತಿ ಮಾಡುತ್ತಿರುವ ತ್ರಾಸಿಯ ಫ್ರಾನ್ಸಿಸ್ ಅಲ್ಮೇಡಾ ತಿಳಿಸಿದ್ದಾರೆ.
ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು , ಇಬ್ರಾಹಿಂಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ನಾನು ಸಾಕಲು ದನದ ಕರುವನ್ನು ನೀಡಿದ್ದೆ. ಅವರು ಅದನ್ನು ಹಟ್ಟಿ ರಚಿಸಿ ಸಾಕುತ್ತಿದ್ದರು. ಮೂರು ದಿನಗಳ ಬಳಿಕ ಅಂದರೆ ಡಿ.26ರಂದು ಗಂಗೊಳ್ಳಿ ಪೊಲೀಸ್ ಠಾಣೆಯ ಎಸ್ಸೈ ನಂಜ ನಾಯ್ಕ ಹಾಗೂ ಸಿಬ್ಬಂದಿ ಇಬ್ರಾಹಿಂ ಮನೆಗೆ ಹೋಗಿ, ಕರು ಬಗ್ಗೆ ವಿಚಾರಿಸಿದ್ದರು. ಬಳಿಕ ಸಂಜೆ ಇಬ್ರಾಹಿಂ ಮತ್ತು ನನ್ನನು ಪೊಲೀಸರು ಠಾಣೆಗೆ ಕರೆಸಿದರು’ ಎಂದು ಮಾಹಿತಿ ನೀಡಿದರು.
‘ನನ್ನ ಹತ್ತಿರ ಕರು ನೀಡಿರುವ ಬಗ್ಗೆ ಪೊಲೀಸರು ಪ್ರಶ್ನಿಸಿದ್ದು, ಇಬ್ರಾಹಿಂಗೆ ನಾನೇ ಉಚಿತವಾಗಿ ನೀಡಿದ್ದೇನೆ ಎಂದು ಹೇಳಿದೆ. ಬಳಿಕ ರಾತ್ರಿ 11 ಗಂಟೆ ವೇಳೆ ಇಬ್ರಾಹಿಂ ಮನೆಗೆ ಪೊಲೀಸರು ಹೋಗಿ ಅಲ್ಲಿದ್ದ ಕರುವನ್ನು ಗಾಡಿಯಲ್ಲಿ ಹಾಕಿ ಠಾಣೆಗೆ ತಂದರು. ಬಳಿಕ ನನ್ನನ್ನು ರಾತ್ರಿ 2 ಗಂಟೆಗೆ ಮನೆಗೆ ಕಳುಹಿಸಿದರು. ಮರುದಿನ ಮಂಕಿ ಕ್ರಾಸ್ ಬಳಿ ಇಬ್ರಾಹಿಂನನ್ನು ಕರೆದೊಯ್ದ ಪೊಲೀಸರು, ಅವರಿಗೆ ಜೀಪಿನಿಂದ ಇಳಿದು ಓಡಲು ಸೂಚಿಸಿದರು. ರಿವಾಲ್ವರನ್ನು ಅವರ ತಲೆಗೆ ಇಟ್ಟು ಓಡುವಂತೆ ಗದರಿಸಿ ನಕಲಿ ಎನ್‌ಕೌಂಟರ್‌ಗೆ ಯತ್ನಿಸಿದರು. ಆದರೆ ಅವರು ಓಡಿಲ್ಲ’ ಎಂದು ಫ್ರಾನ್ಸಿಸ್ ತಿಳಿಸಿದ್ದಾರೆ.
Kshetra Samachara
01/03/2022 07:56 pm