ಮಂಗಳೂರು: ಯುವತಿಯರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಯುವಕನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ಮಂಗಳೂರು ನಗರದ ತಲಪಾಡಿಯಲ್ಲಿ ನಡೆದಿದೆ.
ಕಾಸರಗೋಡು ಜಿಲ್ಲೆಯ ಮಂಜೇಶ್ವರ ತಾಲೂಕಿನ ಹೊಸಬೆಟ್ಟು ನಿವಾಸಿ ಮುಸ್ತಫಾ (18) ಬಂಧಿತ ಆರೋಪಿ. ಕಳೆದ ಶನಿವಾರ ಸ್ಕೂಟರ್ ನಲ್ಲಿ ಬಂದಿದ್ದ ಈತ, ತಲಪಾಡಿಯ ದೇವಿಪುರಕ್ಕೆ ಹೋಗುವ ಒಳ ರಸ್ತೆಯಲ್ಲಿ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವತಿಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಿದ್ದ.
ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದ ಸ್ಥಳೀಯರು, ಆರೋಪಿಯ ಚಹರೆಯನ್ನು ಪತ್ತೆ ಹಚ್ಚಿದ್ದರು. ಇಂದು ಕೂಡ ಮುಸ್ತಫಾ ಸ್ಕೂಟರಿನಲ್ಲಿ ಬಂದಿದ್ದು, ತಲಪಾಡಿ ಶ್ರೀರಾಮ ಭಜನಾ ಮಂದಿರದ ಬಳಿ ನಡೆದುಕೊಂಡು ಹೋಗುತ್ತಿದ್ದ ಯುವತಿಯೊಬ್ಬಳಿಗೆ ಮತ್ತೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಲು ಯತ್ನಿಸಿದ್ದ.
ಇದೇ ವೇಳೆ ಸ್ಥಳೀಯರು ಆತನನ್ನು ಹಿಡಿದು ಥಳಿಸಿ, ಉಳ್ಳಾಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಈ ಬಗ್ಗೆ ಸಂತ್ರಸ್ತೆಯರು ನೀಡಿದ ದೂರಿನಂತೆ ಪೊಲೀಸರು ಪೋಕ್ಸೊ ಸಹಿತ ಎರಡು ಪ್ರಕರಣಗಳನ್ನು ದಾಖಲಿಸಿ, ಆರೋಪಿಯನ್ನು ಕಂಬಿ ಹಿಂದೆ ತಳ್ಳಿದ್ದಾರೆ.
Kshetra Samachara
25/12/2021 06:40 pm