ಮಂಗಳೂರು: ನಿವೃತ್ತ ಶಿಕ್ಷಕಿಯ ಬ್ಯಾಂಕ್ ಖಾತೆಗೆ ಸಂಬಂಧಿಸಿ ನಕಲಿ ದಾಖಲೆ ಸೃಷ್ಟಿಸಿ ಲಕ್ಷಾಂತರ ರೂ. ವಂಚಿಸಿದ ಆರೋಪ ಸಾಬೀತುಗೊಂಡ ಹಿನ್ನೆಲೆಯಲ್ಲಿ ಬ್ಯಾಂಕ್ ಉದ್ಯೋಗಿ ಮಹಿಳೆಯೋರ್ವರಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 4 ವರ್ಷ ಕಾರಾಗೃಹ ಶಿಕ್ಷೆ ಹಾಗೂ 15 ಸಾವಿರ ರೂ. ದಂಡ ವಿಧಿಸಿದೆ.
ನಿವೃತ್ತ ಶಿಕ್ಷಕಿ ಥೆರೆಸಾ ಡಿಸೋಜ(80) ಅವರಿಗೆ ನಗರದ ಮಿಲಾಗ್ರಿಸ್ ಕ್ರಾಸ್ ನಲ್ಲಿರುವ ಆಂಧ್ರ ಬ್ಯಾಂಕ್ ಕ್ಲರ್ಕ್ ಆಗಿದ್ದ ಗ್ರೇಸ್ ಫರ್ನಾಂಡಿಸ್ ಆತ್ಮೀಯರಾಗಿದ್ದರು. ಈ ಹಿನ್ನೆಲೆಯಲ್ಲಿ ನಿವೃತ್ತ ಶಿಕ್ಷಕಿ ಥೆರೆಸಾ ತಮ್ಮ ಪಿಂಚಣಿ ಹಣವನ್ನು ಗ್ರೇಸ್ ಫರ್ನಾಂಡಿಸ್ ಮೂಲಕ ಆಂಧ್ರ ಬ್ಯಾಂಕ್ ಶಾಖೆಯಲ್ಲಿ ಠೇವಣಿ ಇಡಲು ಬಯಸಿದ್ದರು. ಗ್ರೇಸ್ ಫರ್ನಾಂಡಿಸ್ ಆಕೆಯ ಬ್ಯಾಂಕ್ ಖಾತೆ ತಾನೇ ನಿರ್ವಹಿಸುವುದಾಗಿ ನಂಬಿಸಿದ್ದರು. ಆದರೆ, ಆಕೆ ಹಣವನ್ನು ಥೆರೆಸಾ ಡಿಸೋಜ ಖಾತೆಗೆ ಹಾಕದೆ ವಂಚಿಸಿದ್ದರು. ಅಲ್ಲದೆ ಕಂಪ್ಯೂಟರೀಕೃತ ಪಾಸ್ ಬುಕ್ ನೋಂದಣಿ ಮಾಡದೆ ಕೈಬರಹದ ಪಾಸ್ ಬುಕ್ ನೀಡಿ ಬ್ಯಾಂಕ್ ಖಾತೆಗೆ ಹಣ ಹಾಕಿರುವುದಾಗಿ ತೋರಿಸುತ್ತಿದ್ದರು. ಅಲ್ಲದೆ, ಎಫ್ ಡಿ ಇಡಬೇಕಾದ ಹಣಕ್ಕೆ 4 ಎಫ್ ಡಿ ರಶೀದಿಯನ್ನು ಬ್ಯಾಂಕ್ ನಿಂದ ಕದ್ದು, ನಕಲಿ ದಾಖಲೆ ಸೃಷ್ಟಿಸಿ ವಂಚಿಸಿದ್ದರು.
ಆ ಬಳಿಕ ಥೆರೆಸಾ ಡಿಸೋಜ ತಮ್ಮ ಬ್ಯಾಂಕ್ ಖಾತೆ ಪರಿಶೀಲಿಸಿದಾಗ ಮೋಸ ತಿಳಿದು, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಗ್ರೇಸ್ ಫರ್ನಾಂಡಿಸ್ ರನ್ನು ಉದ್ಯೋಗದಿಂದ ಅಮಾನತುಗೊಳಿಸಲಾಗಿತ್ತು.
ಪ್ರಕರಣವನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಚಾರಣೆ ನಡೆಸಿ, ಗ್ರೇಸ್ ಡಿಸೋಜ ಅಪರಾಧಿ ಎಂದು ತೀರ್ಪು ನೀಡಿ 4 ವರ್ಷಗಳ ಕಾರಾಗೃಹ ಶಿಕ್ಷೆ, 15 ಸಾವಿರ ರೂ. ದಂಡ ವಿಧಿಸಿ ನ್ಯಾಯಾಧೀಶ ಟಿ.ಪಿ.ರಾಮಲಿಂಗೇಗೌಡ ತೀರ್ಪು ನೀಡಿದ್ದಾರೆ. ದಂಡದ ಮೊತ್ತದಲ್ಲಿ ತೆರೆಸಾ ಡಿಸೋಜ ಅವರಿಗೆ 10,000 ರೂ. ಪರಿಹಾರ ನೀಡುವಂತೆಯೂ ಆದೇಶಿಸಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಸರಕಾರಿ ಅಭಿಯೋಜಕ ಬಿ.ಶೇಖರ ಶೆಟ್ಟಿ ವಾದಿಸಿದ್ದರು.
Kshetra Samachara
11/11/2021 01:28 pm