ಮುಲ್ಕಿ: ಹಳೆಯಂಗಡಿ ಗ್ರಾಮದ ಪಾವಂಜೆ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಕಳೆದ ಒಂದು ತಿಂಗಳ ಹಿಂದೆ ಯುವಕ ಪ್ರತೀಕ್ ಶೆಟ್ಟಿ ಎಂಬಾತ ಇಬ್ಬರು ಯುವತಿಯರೊಂದಿಗೆ ತೋರಿದ ಅನುಚಿತ ವರ್ತನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಭಾನುವಾರ ಗ್ರಾಮಸ್ಥರ ಎದುರು ದೇವಸ್ಥಾನದಲ್ಲಿ ತಪ್ಪುಕಾಣಿಕೆ ಹಾಕಿ ಕ್ಷಮೆಯಾಚಿಸಿದ್ದಾನೆ.
ಕಳೆದ ತಿಂಗಳ ತಿಂಗಳ ಹಿಂದೆ ಟಿಕ್ ಟಾಕ್ ಖ್ಯಾತಿಯ ಮುಲ್ಕಿ ಸಮೀಪದ ಕಿಲ್ಪಾಡಿ ಪ್ರತೀಕ್ ಶೆಟ್ಟಿ ಎಂಬಾತ ಇಬ್ಬರು ಯುವತಿಯರೊಂದಿಗೆ ಪಾವಂಜೆ ದೇವಸ್ಥಾನದ ಆವರಣದಲ್ಲಿ ಅನುಚಿತ ವರ್ತನೆಯ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟು ವೈರಲ್ ಆಗಿತ್ತು.
ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ಆಡಳಿತ ಮಂಡಳಿಯು ದೇವಸ್ಥಾನಕ್ಕೆ ಬಂದು ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದರು.
ಆದರೆ ಪ್ರತೀಕ್ ಶೆಟ್ಟಿ ಮತ್ತು ಇಬ್ಬರು ಯುವತಿಯರು ಶನಿವಾರ ಮಧ್ಯಾಹ್ನ ಯಾರಿಗೂ ತಿಳಿಸದೆ ಗುಪ್ತವಾಗಿ ಪಾವಂಜೆ ದೇವಸ್ಥಾನಕ್ಕೆ ಬಂದು ತಪ್ಪುಕಾಣಿಕೆ ಹಾಕಿ ಹೋಗಿದ್ದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತೆರಳುವ ಮುನ್ನ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಸತೀಶ್ ಭಟ್ ದೇವಸ್ಥಾನಕ್ಕೆ ಭಾನುವಾರ ಬೆಳಿಗ್ಗೆ ಬಂದು ಗ್ರಾಮಸ್ಥರ ಎದುರು ಕ್ಷಮೆಯಾಚನೆ ಮಾಡುವಂತೆ ತಿಳಿಸಿದ್ದರು.
ಅದರಂತೆ ಟಿಕ್ ಟಾಕ್ ಖ್ಯಾತಿಯ ಪ್ರತೀಕ್ ಶೆಟ್ಟಿ ಇಬ್ಬರೂ ಯುವತಿಯರೊಂದಿಗೆ ಭಾನುವಾರ ಬೆಳಿಗ್ಗೆ ಬಂದು ದೇವಸ್ಥಾನದ ಅರ್ಚಕ ಗಣೇಶ್ ಭಟ್ ಎದುರು ದೇವರಿಗೆ ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆಯಾಚನೆ ಮಾಡಿದ್ದಾರೆ.
ಈ ಬಗ್ಗೆ ಸತೀಶ್ ಭಟ್ ಮಾತನಾಡಿ ಪ್ರಕರಣ ಸುಖಾಂತ್ಯಗೊಂಡಿದ್ದು ದೇವಸ್ಥಾನದಲ್ಲಿ ಮುಂದಿನ ದಿನಗಳಲ್ಲಿ ಸುರಕ್ಷತೆ ಹಾಗೂ ವಸ್ತ್ರಸಂಹಿತೆ ಬಗ್ಗೆ ಗಮನಹರಿಸಲಾಗುವುದು ಎಂದರು. ಈ ಸಂದರ್ಭ ಹಳೆಯಂಗಡಿ ಗ್ರಾ ಪಂ. ಸದಸ್ಯ ಸುಕೇಶ್ ಪಾವಂಜೆ,ದೇವಳದ ಆಡಳಿತಾಧಿಕಾರಿ ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.
ಮುಲ್ಕಿ ಪೊಲೀಸರು ಘಟನೆ ನಡೆಯದಂತೆ ದೇವಸ್ಥಾನದಲ್ಲಿ ಬಿಗು ಬಂದೋಬಸ್ತು ಏರ್ಪಡಿಸಿದ್ದರು.
Kshetra Samachara
29/08/2021 01:38 pm