ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರ ಆರೋಪಿಗೆ 10 ವರ್ಷ ಕಠಿಣ ಸಜೆ

ಮಂಗಳೂರು: ಅಪ್ರಾಪ್ತೆ ಬಾಲಕಿಯ ಮೇಲೆ ನಿರಂತರವಾಗಿ ಒಂದು ವರ್ಷದಿಂದ ಅತ್ಯಾಚಾರ ಮಾಡುತ್ತಿದ್ದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಹಾಗೂ 2 ನೇ ತ್ವರಿತಗತಿ ವಿಶೇಷ ಪೊಕ್ಸೊ ನ್ಯಾಯಾಲಯ 10 ವರ್ಷಗಳ ಕಠಿಣ ಸಜೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಬೊಳ್ಳರ ಮಜಲು ನಿವಾಸಿ ಪ್ರಸಾದ್ (31) ಶಿಕ್ಷೆಗೊಳಗಾದ ಅಪರಾಧಿ. 2018ರ ಜು.28ರಂದು 17 ವರ್ಷದ ಈ ಅಪ್ರಾಪ್ತೆಯು ಪ್ರಸಾದ್ ಮನೆಗೆ ಮನೆ ಕೆಲಸಕ್ಕಾಗಿ ಬಂದಿದ್ದಳು. ಸಂಬಂಧಿಕಳಾದ ಈ ಅಪ್ರಾಪ್ತೆಯೊಂದಿಗೆ ಪ್ರಸಾದ್ ಸಲಿಗೆ ಬೆಳೆಸಿಕೊಂಡಿದ್ದ. ಬಳಿಕ ಪುಸಲಾಯಿಸಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದನು. ಆ ಬಳಿಕವೂ ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗುತ್ತಾ ಬಂದಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದಲ್ಲಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿತ್ತು.

ಈ ವಿಚಾರ ಬಾಲಕಿಯ ತಾಯಿ ಮತ್ತು ಸಹೋದರನಿಗೆ ತಿಳಿದ ಬಳಿಕ ಅವರು 2019 ರ ಜೂ.13ರಂದು ಉಪ್ಪಿನಂಗಡಿ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಪ್ರಸಾದ್ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದರು. ಇನ್ಸ್ಪೆಕ್ಟರ್ ಗಳಾದ ಮಂಜುನಾಥ್ ಡಿ. ಮತ್ತು ನಾಗೇಶ್ ಕೆ. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಸೆಷನ್ ಹೆಚ್ಚುವರಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಂ.ಕೆ. ರಾಧಾಕೃಷ್ಣ ವಿಚಾರಣೆ ನಡೆಸಿ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಘೋಷಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಪೊಕ್ಸೊ ಕಾಯ್ದೆಯ 6 ರನ್ವಯ ಆರೋಪಿಗೆ 10 ವರ್ಷ ಕಠಿಣ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಬಾಲಕಿಗೆ ಸರ್ಕಾರದ ವತಿಯಿಂದ 4 ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ನ್ಯಾಯಾಧೀಶರು ನಿರ್ದೇಶಿಸಿದ್ದಾರೆ.

ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಸಿ. ವೆಂಕಟರಮಣ ಸ್ವಾಮಿ ವಾದ ಮಂಡಿಸಿದರು.

Edited By : Nirmala Aralikatti
PublicNext

PublicNext

24/03/2022 08:51 pm

Cinque Terre

35.86 K

Cinque Terre

7

ಸಂಬಂಧಿತ ಸುದ್ದಿ