ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯ ರಾವ್ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ 20 ವರ್ಷಗಳ ಕಾರಾಗೃಹ ಶಿಕ್ಷೆ ಹಾಗೂ ದಂಡ ವಿಧಿಸಿ ಜಿಲ್ಲಾ ನಾಲ್ಕನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಸ್ಫೋಟಕ ವಸ್ತುಗಳ ಕಾಯ್ದೆ 1908ರ ಸೆಕ್ಷನ್ 4ರ ಅನ್ವಯ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10,000 ರೂ. ದಂಡ (ದಂಡ ತೆರಲು ಸಾಧ್ಯವಾಗದಿದ್ದಲ್ಲಿ 6 ತಿಂಗಳ ಸಾದಾ ಜೈಲು ಶಿಕ್ಷೆ). ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ 1967ರ ಸೆಕ್ಷನ್ 16ರ ಅನ್ವಯ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10,000 ರೂ. ದಂಡ, (ದಂಡ ತೆರಲು ಸಾಧ್ಯವಾಗದಿದ್ದಲ್ಲಿ 6 ತಿಂಗಳ ಸಾದಾ ಜೈಲು ಶಿಕ್ಷೆ) ಅನುಭವಿಸುವಂತೆ ಜಿಲ್ಲಾ ನಾಲ್ಕನೇ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶೆ ಬಿ.ಆರ್.ಪಲ್ಲವಿ ತೀರ್ಪು ವಿಧಿಸಿ ಆದೇಶಿಸಿದ್ದಾರೆ. ಅಪರಾಧಿ ಈ ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕು.
2020ರ ಜನವರಿ 20ರಂದು ಬೆಳಗ್ಗೆ 9 ಗಂಟೆ ಸುಮಾರಿಗೆ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಆದಿತ್ಯ ರಾವ್ ಸ್ಫೋಟಕ ಸಾಮಗ್ರಿಗಳನ್ನು ಇರಿಸಿದ್ದ. ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದ ಶಂಕಾಸ್ಪದ ಸ್ಫೋಟಕ ಸಾಮಗ್ರಿಗನ್ನು ಅಂದೇ ವಿಮಾನ ನಿಲ್ದಾಣ ಸಮೀಪದ ಕೆಂಜಾರು ಎಂಬಲ್ಲಿ ನಿಷ್ಕ್ರಿಯಗೊಳಿಸಲಾಗಿತ್ತು. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸುತ್ತಿದ್ದಂತೆ ಆದಿತ್ಯ ರಾವ್ 2020ರ ಜ.22ರಂದು ತಾನೇ ಬಾಂಬ್ ಇರಿಸಿರುವುದಾಗಿ ಬೆಂಗಳೂರಿನ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಮುಂದೆ ಶರಣಾಗಿದ್ದ. ಆ ಬಳಿಕದಿಂದ ಆದಿತ್ಯ ರಾವ್ ಕಾರಾಗೃಹ ವಾಸಿಯಾಗಿದ್ದಾನೆ.
Kshetra Samachara
16/03/2022 08:34 pm