ಮಂಗಳೂರು: ಮಂಗಳೂರು ನಗರದ ಹಲವೆಡೆ ಎಟಿಎಂ ಗಳಲ್ಲಿ 'ಸ್ಕಿಮ್ಮಿಂಗ್' ಉಪಕರಣ ಅಳವಡಿಸಿ ಹಣ ದೋಚುತ್ತಿದ್ದ ನಾಲ್ವರು ಅಂತಾರಾಜ್ಯ ಚೋರರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಕೇರಳದ ತ್ರಿಶ್ಯೂರ್ ನ ಗ್ಲಾಡ್ವಿನ್ ಜಿಂಟೋ ಜಾಯ್, ದೆಹಲಿ ಪ್ರೇಮ್ ನಗರ ನಿವಾಸಿ ದಿನೇಶ್ ಸಿಂಗ್ ರಾವತ್, ಕಾಸರಗೋಡು ಜಿಲ್ಲೆಯ ಅಬ್ದುಲ್ ಮಜೀದ್ ಮತ್ತು ಕೇರಳದ ಅಲಪ್ಪುರ ನಿವಾಸಿ ರಾಹುಲ್ ಬಂಧಿತರು.
2020ರ ನವೆಂಬರ್ ನಿಂದ ಇಲ್ಲಿಯವರೆಗೆ ಮಂಗಳೂರಿನ ಕುಳಾಯಿ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ, ಚಿಲಿಂಬಿ, ನಾಗುರಿ, ಕಪಿತಾನಿಯೋದ ಕೆನರಾ ಬ್ಯಾಂಕ್ ಎಟಿಎಂ, ಮಂಗಳಾದೇವಿಯ ಎಸ್ ಬಿಐ ಎಟಿಎಂ ಗಳಲ್ಲಿ ಸ್ಕಿಮ್ಮಿಂಗ್ ಅಳವಡಿಸಿ, ಗ್ರಾಹಕರ ಮಾಹಿತಿ ಕದ್ದು ನಕಲಿ ಎಟಿಎಂ ಕಾರ್ಡ್ ತಯಾರಿಸಿ ದೆಹಲಿ, ಬೆಂಗಳೂರು, ಕಾಸರಗೋಡು, ಮಡಿಕೇರಿ, ಗೋವಾ ಮುಂತಾದ ಕಡೆಗಳಲ್ಲಿ ಹಣ ವಿತ್ ಡ್ರಾ ಮಾಡುತ್ತಿದ್ದರು.
ಈ ಬಗ್ಗೆ ಮಂಗಳೂರು ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ 22 ಪ್ರಕರಣಗಳು ದಾಖಲಾಗಿತ್ತು. ಆರೋಪಿಗಳಿಂದ ಸ್ಕಿಮ್ಮಿಂಗ್ ಡಿವೈಸ್, ಎರಡು ಕಾರು, ನಕಲಿ ಎಟಿಎಂ ಕಾರ್ಡುಗಳು, ಐದು ಮೊಬೈಲ್, ಎರಡು ಆ್ಯಪಲ್ ವಾಚ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
Kshetra Samachara
24/02/2021 03:22 pm