ಮುಲ್ಕಿ: ಕಿನ್ನಿಗೋಳಿಯ ಬಸ್ ನಿಲ್ದಾಣ ಬಳಿ ಬುಧವಾರ ಅನುಗ್ರಹ ಕಟ್ಟಡದ ಮಾಲೀಕ ನಿತ್ಯಾನಂದ ಮತ್ತು ಸಹೋದರರು, ಯುವಕ ನರೇಂದ್ರ ಪೂಜಾರಿ ಎಂಬವರ ಮೇಲೆ ಬೈಕ್ ಪಾರ್ಕಿಂಗ್ ವಿಷಯದಲ್ಲಿ ಅಮಾನುಷವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕಿನ್ನಿಗೋಳಿಯಲ್ಲಿ ನಾಗರಿಕರು ಬೃಹತ್ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಗುತ್ತಕಾಡು ಬಿಲ್ಲವ ಸಂಘದ ಅಧ್ಯಕ್ಷ ಕುಶಲ ಪೂಜಾರಿ ಮಾತನಾಡಿ, ಹಲವು ವರ್ಷಗಳಿಂದ ಈ ಅನುಗ್ರಹ ಕಟ್ಟಡ ಮಾಲೀಕ ನಿತ್ಯಾನಂದ ಮತ್ತು ಸಹೋದರರು ತಮ್ಮ ಕಟ್ಟಡದ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಬೈಕ್ ಅಥವಾ ಇನ್ನಿತರ ವಾಹನಗಳನ್ನು ಪಾರ್ಕಿಂಗ್ ಮಾಡುವವರಿಗೆ ಕಿರುಕುಳ ನೀಡುತ್ತಾ ಬಂದಿದ್ದು, ಅತಿರೇಕದಿಂದ ವರ್ತಿಸುತ್ತಿದ್ದಾರೆ.
ಕೆಲ ದಿನಗಳ ಹಿಂದೆ ಪೊಲೀಸ್ ಸಿಬ್ಬಂದಿಯೊಬ್ಬರ ಗಾಡಿಯ ಚಕ್ರದ ಗಾಳಿ ತೆಗೆದಿದ್ದಾರೆ. ಅಲ್ಲದೆ, ದ್ವಿಚಕ್ರ ವಾಹನ ನಿಲುಗಡೆಗೆ ಬಂದಿದ್ದ ವೃದ್ಧರನ್ನು ದೂಡಿ ಹಾಕಿದ್ದಾರೆ.
ನಿನ್ನೆ ಯುವಕನ ಮೇಲೆ ಬೇಕಾಬಿಟ್ಟಿ ಹಲ್ಲೆ ನಡೆಸಿದ್ದಾರೆ. ಆದರೂ ಪೊಲೀಸರು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಪಂ ಸದಸ್ಯ ದಿವಾಕರ ಕರ್ಕೇರ ಮಾತನಾಡಿ, ಯುವಕನ ಮೇಲೆ ಹಲ್ಲೆ ಖಂಡನೀಯ. ಎರಡು ದಿನಗಳಲ್ಲಿ ಆರೋಪಿಗಳ ವಿರುದ್ಧ ಸೂಕ್ತ ತನಿಖೆ ನಡೆಸುವುದಲ್ಲದೆ, ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸಲಾಗುವುದು. ರಾಜ್ಯ ಹೆದ್ದಾರಿ ಬದಿ ಸ್ಥಳದಲ್ಲಿ ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿ ಅನೇಕ ಬಾರಿ ಮೆನ್ನಬೆಟ್ಟು ಗ್ರಾಪಂಗೆ ಮನವಿ ಸಲ್ಲಿಸಲಾಗಿದೆ ಎಂದರು.
ಈ ನಡುವೆ ಪ್ರತಿಭಟನೆ ಸ್ಥಳದಲ್ಲಿ ನಾಗರಿಕರು ಆರೋಪಿಗಳ ಕಟ್ಟಡಕ್ಕೆ ಮುತ್ತಿಗೆ ಹಾಕುವ ಪ್ರಯತ್ನದಲ್ಲಿದ್ದಾಗ ಪೊಲೀಸರ ಜತೆ ಮಾತಿನ ಚಕಮಕಿಯೂ ನಡೆಯಿತು.
ಆರೋಪಿಗಳ ವಿರುದ್ಧ ಸ್ಥಳೀಯ ನಾಗರಿಕರು, ಯುವಕರು ಧಿಕ್ಕಾರ ಕೂಗಿ ನ್ಯಾಯ ಕೊಡಿಸಬೇಕೆಂದು ಘೋಷಣೆ ಕೂಗಿದರು.
ಒಂದು ಹಂತದಲ್ಲಿ ಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾದಾಗ ಮುಲ್ಕಿ ಠಾಣೆ ಇನ್ಸ್ ಪೆಕ್ಟರ್ ಕುಸುಮಾಧರ್ ಸ್ಥಳಕ್ಕೆ ಧಾವಿಸಿ ಪ್ರತಿಭಟನಾನಿರತರ ಸಹಿತ ಮುಖಂಡರನ್ನು ಸಮಾಧಾನಪಡಿಸಿದರು.
ಸೂಕ್ತ ಸಾಕ್ಷಿ-ಪುರಾವೆ ಸಂಗ್ರಹಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಇನ್ಸ್ ಪೆಕ್ಟರ್ ಭರವಸೆ ನೀಡಿದ ಬಳಿಕ ಪ್ರತಿಭಟನೆ ನಿಲ್ಲಿಸಲಾಯಿತು.
ಮಾಜಿ ಜಿಪಂ ಸದಸ್ಯೆ ಆಶಾ ಸುವರ್ಣ, ಸಾಮಾಜಿಕ ಕಾರ್ಯಕರ್ತರಾದ ರವೀಂದ್ರ ದೇವಾಡಿಗ, ಪ್ರಕಾಶ್ ಆಚಾರ್ಯ , ವಿಶ್ವನಾಥ ಶೆಟ್ಟಿ ಪದ್ಮನೂರು, ಲಕ್ಷ್ಮಣ ಪುನರೂರು ಮತ್ತಿತರರು ಹಾಜರಿದ್ದರು.
ಸ್ಥಳದಲ್ಲಿ ಅಹಿತಕರ ಘಟನೆ ನಡೆಯದಂತೆ ಮುಲ್ಕಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.
Kshetra Samachara
31/12/2020 01:08 pm