ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಉಪ್ಪುಂದ-ಕೊಡೇರಿ ಮೀನುಗಾರರ ನಡುವೆ ಘರ್ಷಣೆ: ಲಾಠಿ ಬೀಸಿದ ಪೊಲೀಸರು

ಬೈಂದೂರು: ಕಿರಿಮಂಜೇಶ್ವರ ಗ್ರಾಮದ ಕೊಡೇರಿ ಕಿರು ಮೀನುಗಾರಿಕೆ ಬಂದರಿನಲ್ಲಿ ಮೀನು ಹರಾಜು ಸಂಬಂಧ ಉಪ್ಪುಂದ ಹಾಗೂ ಕೊಡೇರಿ ಮೀನುಗಾರರ ನಡುವೆ ಕೆಲಕಾಲದಿಂದ ಹೊಗೆಯಾಡುತ್ತಿದ್ದ ಅಸಮಾಧಾನ ಶನಿವಾರ ಸ್ಫೋಟಗೊಂಡು ಭಾರಿ ಘರ್ಷಣೆ ನಡೆದಿದ್ದು, ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ನಡೆಸಿದರು.

ಮೀನುಗಾರಿಕೆ ಇಲಾಖೆ ಕೊಡೇರಿ ಬಂದರಿನ ಮೀನು ಹರಾಜು ಪ್ರಾಂಗಣದಲ್ಲಿ ಮೀನು ಹರಾಜು ಮಾಡಲು ಉಪ್ಪುಂದ, ಕೊಡೇರಿ ಹಾಗೂ ಮರವಂತೆ ಭಾಗದ ಮೀನುಗಾರರಿಗೆ ಇತ್ತೀಚೆಗಷ್ಟೆ ತಾತ್ಕಾಲಿಕ ಅನುಮತಿ ನೀಡಿತ್ತು. ಉಪ್ಪುಂದ ಭಾಗದ ನೂರಕ್ಕೂ ಹೆಚ್ಚು ದೋಣಿಗಳು ಶನಿವಾರ ಮಧ್ಯಾಹ್ನ ಮೀನುಗಾರಿಕೆ ನಡೆಸಿ, ಎಡಮಾವಿನ ಹೊಳೆ ಮೂಲಕ ಮೀನು ಮಾರಾಟ ಮಾಡಲು ಬಂದರಿನ ಪ್ರಾಂಗಣ ಪ್ರವೇಶಿಸುವಾಗ, ಕೊಡೇರಿ ಮೀನುಗಾರರು ಅಲ್ಲಿ ತಮಗೆ ಮೂಲಸೌಕರ್ಯ ಕಲ್ಪಿಸುವ ಮತ್ತು ಪ್ರಾಂಗಣ ಇರುವ ದಂಡೆಗೆ ಹೋಗಲು ನದಿಗೆ ಸೇತುವೆ ನಿರ್ಮಾಣ ಮಾಡುವವರೆಗೆ ಅಲ್ಲಿ ಮೀನು ಹರಾಜಿಗೆ ಅವಕಾಶ ನೀಡುವುದಿಲ್ಲ ಎಂದು ನದಿಯಲ್ಲಿ ಉಪ್ಪುಂದದ ದೋಣಿಗಳು ಸಂಚರಿಸದಂತೆ ತಮ್ಮ ದೋಣಿ ಅಡ್ಡ ಇರಿಸಿ ತಡೆಯೊಡ್ಡಿದರು.

ಕುಂದಾಪುರ ಎಎಸ್‍ಪಿ ಹರಿರಾಮ್ ಶಂಕರ ಅಗಮಿಸಿ, ಎರಡು ಭಾಗದ ಮೀನುಗಾರರ ನಡುವೆ ಮಾತುಕತೆ ನಡೆಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರೂ ತಮ್ಮ ಬೇಡಿಕೆ ಈಡೇರುವ ತನಕ ಹರಾಜು ಪ್ರಾಂಗಣ ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಕೊಡೇರಿ ಮೀನುಗಾರರು ಪಟ್ಟುಹಿಡಿದರು.

ಸುಮಾರು ನಾಲ್ಕು ತಾಸು ಉಪ್ಪುಂದದ ಮೀನುಗಾರರು ತಮ್ಮ ದೋಣಿಯಲ್ಲಿದ್ದ ಮೀನು ಖಾಲಿ ಮಾಡದೆ ತಮ್ಮ ದೋಣಿಗಳನ್ನು ನದಿಯಲ್ಲೇ ನಿಲ್ಲಿಸಿದ್ದರು. ಬಳಿಕ ತಹಶೀಲ್ದಾರ್ ಬಿ.ಪಿ. ಪೂಜಾರ್ ಭೇಟಿ ನೀಡಿ ಎರಡು ಭಾಗದ ಮೀನುಗಾರರೊಂದಿಗೆ ಮಾತುಕತೆ ನಡೆಸಿದರು. ಆದರೆ, ಅದು ಫಲ ನೀಡಲಿಲ್ಲ. ಮೀನು ಹರಾಜಿಗೆ ತಡೆಯೊಡ್ಡಿದ ಕಾರಣ ಉಪ್ಪುಂದದ ಕಡೆಯವರು ತಮ್ಮ ದೋಣಿಗಳನ್ನು ಕೊಡೇರಿ ಕಡೆಯ ದೋಣಿಗಳತ್ತ ನುಗ್ಗಿಸಿದರು. ಆಗ ಇಕ್ಕಡೆಯವರ ನಡುವೆ ಘರ್ಷಣೆ ನಡೆದು ನದಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಯಿತು. ಪೊಲೀಸರು ದೋಣಿ ಮೇಲೇರಿ ಲಾಠಿ ಬೀಸಿ ತಹಬಂದಿಗೆ ತರುವ ಪ್ರಯತ್ನ ನಡೆಸಿದರು.

Edited By : Manjunath H D
Kshetra Samachara

Kshetra Samachara

09/11/2020 12:49 pm

Cinque Terre

34.85 K

Cinque Terre

0

ಸಂಬಂಧಿತ ಸುದ್ದಿ