ಉಡುಪಿ: ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಯುವಕನೊಬ್ಬ ಆಸ್ಪತ್ರೆಗೆ ಕರೆತಂದು ಬಿಟ್ಟು ಹೋಗಿದ್ದು , ಆ ಯುವತಿ ಕೆಲವೇ ಹೊತ್ತಿನಲ್ಲಿ ಮೃತಪಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದ್ದು,ಯುವಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ನಿನ್ನೆ ಸಂಜೆ ಸುಮಾರು 6:30ರ ಹೊತ್ತಿಗೆ ರಿಕ್ಷಾದಲ್ಲಿ ಯುವತಿಯನ್ನು ಕರೆದು ತಂದಿದ್ದ ಯುವಕ ಖಾಸಗಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿದ್ದ.
ಯುವತಿಯ ಮನೆಯವರಿಗೆ ಕರೆಮಾಡಿ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.ಯವತಿ ರಕ್ಷಿತಾ ನಾಯಕ್ ನಿಗೂಢವಾಗಿ ಸಾವನ್ನಪ್ಪಿದ್ದು , ಈಕೆ ಹಿರಿಯಡ್ಕ ಠಾಣಾ ವ್ಯಾಪ್ತಿಯ ಕುಕ್ಕೆಹಳ್ಳಿ ನಿವಾಸಿ. ಕೆಲಸ ಮತ್ತು ಶಿಕ್ಷಣದ ಉದ್ದೇಶಕ್ಕಾಗಿ ಉಡುಪಿ ನಗರದಲ್ಲಿ ಈಕೆ ವಾಸ್ತವ್ಯ ಹೂಡಿದ್ದಳು.
ಹದಿನೈದು ದಿನಕ್ಕೊಮ್ಮೆ ಈಕೆ ತನ್ನ ಮನೆಗೆ ಹೋಗಿ ಬರುತ್ತಿದ್ದಳು.ರಕ್ಷಿತಾಳನ್ನು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ಬಿಟ್ಟುಹೋದ ಯುವಕನ ಹೆಸರು ಪ್ರಶಾಂತ್ ಕುಂದರ್. ಇದೀಗ ಯುವಕನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ. ರಕ್ಷಿತಾಳ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದ್ದು, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
25/10/2020 12:46 pm