ಮಂಗಳೂರು: 'ಬೈರಾಗಿ' ಸಿನಿಮಾ ರಿಲೀಸ್ ಆಗುತ್ತಿದೆ. ವೇದ ಸಿನಿಮಾ ಚಿತ್ರೀಕರಣ ಆಗುತ್ತಿದೆ. ಮತ್ತೊಂದು ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೊದಲ ಬಾರಿಗೆ ನಾನು ಹಾಗೂ ಪ್ರಭುದೇವ್ ಕಾಂಬಿನೇಷನ್‌ನಲ್ಲೊಂದು ಸಿನಿಮಾ ನಿರ್ಮಾಣ ಆಗುತ್ತಿದೆ. ಆ ಬಳಿಕ ನೀ ಸಿಗುವವರೆಗೆ ಎಂಬ ಸಿನಿಮಾ ಕೈಯಲ್ಲಿದೆ ಎಂದು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಹೇಳಿದರು.
ಬಾಲಿವುಡ್‌ನಲ್ಲಿ ಮುಂಬೈ ಪೊಲೀಸರಿಗೋಸ್ಕರವೇ ಒಂದು ದಿನ ಕಾರ್ಯಕ್ರಮ ಮಾಡಲಾಗುತ್ತದೆ. ಅದೇ ರೀತಿಯಲ್ಲಿ ಸ್ಯಾಂಡಲ್‌ವುಡ್‌ನಲ್ಲೂ ಪ್ಲ್ಯಾನ್ ಇದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿವರಾಜ್ ಕುಮಾರ್ ಅವರು, ಅಪ್ಪಾಜಿ ಪೊಲೀಸ್‌ನವರಿಗೆ ಮಾಡಿದಷ್ಟು ಕಾರ್ಯಕ್ರಮ ಬೇರೆ ಯಾರೂ ಮಾಡಿಲ್ಲ. ಕರ್ನಾಟಕ ಮಾತ್ರವಲ್ಲದೆ ದೆಹಲಿಗೆ ಹೋಗಿ ಪೊಲೀಸರಿಗಾಗಿ ಕಾರ್ಯಕ್ರಮ ಮಾಡಿದ್ದಾರೆ. ಬೇಕಾದರೆ ದಾಖಲೆ ತೆಗೆದು ನೋಡಬಹುದು. ಬಾಲಿವುಡ್ ಮಾದರಿಯಲ್ಲಿ ಕರ್ನಾಟಕದಲ್ಲೂ ಕನ್ನಡ ಸಿನಿಮಾ ಇಂಡಸ್ಟ್ರಿಯಿಂದ ಪೊಲೀಸರಿಗಾಗಿ ಕಾರ್ಯಕ್ರಮ ಮಾಡುವ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದರು.
ಇಂದಿನ ಮಂಗಳೂರಿನ ಪೊಲೀಸ್ ಕಾರ್ಯಕ್ರಮಕ್ಕೆ ಬಂದಿರೋದು ನನಗೆ ಬಹಳ ಸಂತೋಷವಾಯಿತು. ಪೊಲೀಸ್ ಯೂನಿಫಾರ್ಮ್, ಆ ಗತ್ತು ನೋಡಿ ಬಹಳ ಸಂತೋಷವಾಯಿತು. ಅದರಲ್ಲೂ ಮಂಗಳೂರಿನಲ್ಲೂ ಈ ರೀತಿಯ ಗತ್ತು ನೋಡಿ ಖುಷಿಯಾಯಿತು. ಪುನೀತ್ ರಾಜ್‌ಕುಮಾರ್ ಗೆ ಪದ್ಮಶ್ರೀ ದೊರೆಯಬೇಕೆಂಬ ಅಭಿಯಾನದ ಬಗ್ಗೆ ಮಾತನಾಡಿ, ಅದರಲ್ಲೇ ಜನರಿಗೆ ಅವರ ಮೇಲೆ ಎಷ್ಟು ಪ್ರೀತಿಯಿದೆ ಎಂದು ಗೊತ್ತಾಗುತ್ತದೆ. ಮನುಷ್ಯರ ಮೇಲೆ ಪ್ರೀತಿ ಗೌರವ ಬರಲು ಅವರ ಒಳ್ಳೆಯತನ, ನಡವಳಿಕೆ ಸಾಕು. ಮಂಗಳೂರು ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಅವರ ಕಂಠ ಬಹಳ ಚೆನ್ನಾಗಿದೆ. ಟಗರು ಹಾಡು ಹಾಡೋದು ಅಷ್ಟೊಂದು ಸುಲಭವಲ್ಲ. ಡಾನ್ಸ್ ಕೂಡಾ ಚೆನ್ನಾಗಿ ಮಾಡಿದ್ದಾರೆ ಎಂದು ಹೇಳಿದರು.
ಟಾಕೀಸ್ ಆ್ಯಪ್ ಬಗ್ಗೆ ಮಾತನಾಡಿ, ಇಡೀ ಸಿನಿಮಾ ಇಂಡಸ್ಟ್ರಿಗೆ ಇದು ಪ್ರಯೋಜನ ಆಗುತ್ತದೆ. ಅವಕಾಶ ಸಿಗದವರಿಗೆ ವಾರಕ್ಕೆ ಎರಡು ಸಿನಿಮಾಗಳು ಟಾಕೀಸ್ ಆ್ಯಪ್ ಮೂಲಕ ರಿಲೀಸ್ ಮಾಡಲು ಅವಕಾಶವಿದೆ. ಇದರಲ್ಲಿ ವೆಬ್ ಸೀರೀಸ್, ಸಾಟ್ ಮೂವೀಸ್‌ಗಳಿಗೂ ಅವಕಾಶ ಇದೆ. ಈ ಆ್ಯಪ್ ಮಾಡಿರುವವರು ತುಳುವರು. ಆದರೆ ಅವರು ಕನ್ನಡ ಸಿನಿಮಾಗಳಿಗೂ ಅವಕಾಶ ನೀಡಿರೋದು ವಿಶೇಷ. ಕನ್ನಡಿಗರಿಂದ ಕನ್ನಡಿಗರಿಗೋಸ್ಕರ ಎಂಬ ಕ್ಯಾಪ್ಷನ್ ನೀಡಿದ್ದಾರೆ. ಇದು ನಿಜವಾಗಿಯೂ ಉತ್ತಮ ಕಾರ್ಯ. ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಶಿವರಾಜ್ ಕುಮಾರ್ ಹೇಳಿದರು.
PublicNext
02/05/2022 07:14 pm