ಹುಬ್ಬಳ್ಳಿ : ಗೊತ್ತು ಗುರಿ ಇಲ್ಲದ ಭವಿಷ್ಯದ ಹುಡುಕಾಟಕ್ಕಾಗಿ ಹುಟ್ಟೂರು ತೊರೆಯಬೇಕಾಯಿತು. ವಿದ್ಯಾಭ್ಯಾಸಕ್ಕೆ ವಿದಾಯ ಹೇಳಬೇಕಾಯಿತು. ಸಿಕ್ಕ ರೈಲು ಹತ್ತಿ, ದೇಶ ಭಾಷೆ ಅರಿಯದ ಮುಂಬೈ ಎಂಬ ಮಹಾನಗರ ತಲುಪಿದ್ದೂ ಆಯಿತು.
ಅನೇಕ ಹೋಟೆಲುಗಳಲ್ಲಿ ಕ್ಲೀನರ್ ಆಗಿ ಕೆಲಸ ಮಾಡಿದ್ದಾಯಿತು, ತಟ್ಟೆ ತೊಳೆದಿದ್ದಾಯಿತು. ಕೊನೆಗೆ ದೇವರಂತ ಮಾಲೀಕನ ಆಶ್ರಯದಲ್ಲಿ ಒಂದೇ ಹೋಟೆಲ್ ಒಳಗೆ ಸತತ 12 ವರ್ಷ ಟೇಬಲ್ ಕ್ಲೀನರ್ ವೇಟರ್ ಕೊನೆಗೆ ಮ್ಯಾನೇಜರ್ ಆಗಿ ಕೆಲಸ ಮಾಡಿದ ಬಾಲಕನೋರ್ವ ಇಂದು ಪ್ರತಿಷ್ಠಿತ ಬರೋಬ್ಬರಿ 12 ಹೋಟೆಲ್ ಮಾಲೀಕ ಎಂದ್ರೇ ಆಶ್ಚರ್ಯ ಅಲ್ವೇ ? ನಿಜಕ್ಕೂ ಈ ವಿಷಯ ನೀವೂ ನಂಬ್ತಿರಾ ?
ನಂಬಲೇಬೇಕು ಇದು ಯಾವುದೋ ಸಿನಿಮಾದ 3 ತಾಸಿನ ಕಥೆಯಲ್ಲ. ಬದಲಾಗಿ ರಾಜೇಂದ್ರ ಶೆಟ್ಟಿ ಎಂಬ ಶ್ರಮ ಜೀವಿಯ 37 ವರ್ಷಗಳ ಯಶೋಗಾಥೆ ಇದು.
ಅರೆ. ಏನಪ್ಪಾ ಯಾರಿದು ಅಂತೀರಾ? ಅವರೇ ಹೋಟೆಲ್ ಉದ್ಯಮಿ ರಾಜೇಂದ್ರ ಶೆಟ್ಟಿ. ಕೇವಲ ರಾಜೇಂದ್ರ ಶೆಟ್ಟಿ ಅಂದ್ರೆ ಕೆಲವರಿಗೆ ಗೊತ್ತಾಗದಿರಬಹುದು. ಪಂಜುರ್ಲಿ ಹೋಟೆಲ್ ಶೆಟ್ರು ಅಂದ್ರೆ. ಓ ಅವ್ರಾ ಎಂದು ಉದ್ಗಾರ ತೆಗೆಯುವುದು ಸಹಜ.
ನೀವೇನು ಈಗ ಭೇಟಿ ನೀಡಿ ರುಚಿಕಟ್ಟಾದ, ಸ್ವಾದ ಭರಿತ ಊಟ ಮಾಡಿದಿರಲ್ಲಾ ಅದೇ 'ಪಂಜುರ್ಲಿ ಲೀಲಾವತಿ ಪ್ಯಾಲೇಸ್' ಹೋಟೆಲ್ ಮಾಲೀಕರೂ ಹೌದು. ಇವ್ರು ಮೂಲತಃ ಉಡುಪಿ ಜಿಲ್ಲೆಯ ಡೆಂದೂರು ಕಟ್ಟೆ ಗ್ರಾಮದ ಬಡ ಕುಟುಂಬದಿಂದ ಬಂದವರು. ಅಂದು ಕುಟುಂಬದ ಬಡತನದ ದಿನ ನೋಡಿ ಏನಾದ್ರೂ ದುಡಿಮೆ ಮಾಡಬೇಕೆಂಬ ಛಲ ತೊಟ್ಟು, ಹುಬ್ಬಳ್ಳಿ ಧಾರವಾಡ ಸುತ್ತಿ ಕೊನೆಗೆ ಹಸಿವಿನ ಓಟ ಬೆನ್ನಟ್ಟಿ ಮುಂಬೈ ತಲುಪಿದ ಈ ರಾಜೇಂದ್ರ ಶೆಟ್ಟಿ, ಇಂದು ಅದೆಷ್ಟೋ ಹಸಿದ ಹೊಟ್ಟೆಗೆ ಅನ್ನ ನೀಡುತ್ತಿದ್ದಾರೆ.
ಮುಂಬೈನಲ್ಲಿ ಹೋಟೆಲ್ ಕ್ಲೀನರ್ ಕಾಯಕದಲ್ಲೇ ತೃಪ್ತಿ ಪಟ್ಟಾಗ ತಾಯಿಯ ಮಾತಿಗೆ ಬೆಲೆ ಕೊಟ್ಟು ಮುಂಬೈ ಬಿಟ್ಟು ಮರಳಿ ಬಂದು ಹುಬ್ಬಳ್ಳಿಯಲ್ಲೇ ಜನ್ಮದಾತೆ ಹೆಸರಿನಲ್ಲಿ "ಲೀಲಾವತಿ ಪ್ಯಾಲೇಸ್" ಮನೆದೇವ್ರ ಹೆಸರಲ್ಲಿ "ಪಂಜುರ್ಲಿ" ಎಂಬ ಸುಪ್ರಸಿದ್ಧ ಹೋಟೆಲ್ ಸ್ಥಾಪಿಸಿದ ಸಾಧಕ.
ಹೋಟೆಲ್ ಆಲೋಚನೆ ಹೊಳೆದದ್ದೇ ತಡ ಸ್ನೇಹಿತ ನವೀನ್ ಕಾಮತ್ ಕೊಟ್ಟ 50,000 ರೂಪಾಯಿ ಸಹಾಯವೇ ಇಂದು ಕೋಟಿ ಬಂಡವಾಳದ ಉದ್ಯಮಕ್ಕೆ ಬುನಾದಿಯಾಯಿತು. ಯಾವುದೇ ಜಾಗ ಪರಿಗಣಿಸಿದೇ ಜನರನ್ನು ಜನರ ಅಪೇಕ್ಷೆಯನ್ನು ಕಂಡು ಅದರಂತೆ ಸೇವೆಯನ್ನು ನೀಡುತ್ತಾ ಅಂದಿನಿಂದ ಇಂದಿನವರೆಗೂ ತಾಯಿ, ಮಗಳು, ಹೆಂಡತಿ, ಪ್ರಾಮಾಣಿಕತೆ ಎಂಬ ನಾಲ್ಕು ಸಿದ್ಧಾಂತ ಸತ್ಯ ಸಾಕ್ಷಾತ್ಕಾರದ ದುಡಿಮೆ ಫಲವೇ ಈ ಆದರ್ಶ ಉದ್ಯಮಿ ನೀತಿ.
ನಿಜ, ತಾವಿಷ್ಟು ಸಾಧನೆ ಮಾಡಿದ್ರೂ ಒಂದಲ್ಲ ಎರಡಲ್ಲ ಎಂಟು ಹೋಟೆಲ್ ಕಟ್ಟಿದ್ರೂ, ಇದು ನಾನಲ್ಲ ನನ್ನ ಶ್ರಮ ಮತ್ತು ಜನಾಶೀರ್ವಾದವೇ ನನ್ನ ಶ್ರೀರಕ್ಷೆ ಎಂಬ ರಾಜೇಂದ್ರ ಶೆಟ್ಟಿ ಹೋಟೆಲ್ ಉದ್ಯಮದ ಯಶಸ್ಸಿನಲ್ಲಿ ಗಳಿಸಿದ ನೂರಾರು ಪ್ರಶಸ್ತಿ ಪುರಸ್ಕಾರಕ್ಕಿಂತ ತನ್ನಂತೆ ತಮ್ಮ ಹೋಟೆಲ್ ಕಾರ್ಮಿಕನು ಮಾಲೀಕ ಆಗ್ಬೇಕು ಎನ್ನುವ ಇವರು ಹುಬ್ಬಳ್ಳಿ ಧಾರವಾಡದ 5 "ಪಂಜುರ್ಲಿ" ಹುಬ್ಬಳ್ಳಿಯ "ಲೀಲಾವತಿ ಪ್ಯಾಲೇಸ್" ಸೇರಿ ಬೆಳಗಾವಿಯ "ಪಂಜುರ್ಲಿ" ಹೋಟೆಲ್'ನ ಪ್ರತಿ ಕಾರ್ಮಿಕನು ಇವರ ಸ್ನೇಹಿತ ಆಪ್ತ ಬಂಧು, ಸಹೋದರರಂತೆ ಅಲ್ಲಾ ಅವರೆಲ್ಲ ಸಹೋದರರೇ ಎನ್ನುತ್ತಾರೆ.
ಬಾಲ್ಯದ ದಿನಗಳಲ್ಲಿ ಮುಂಬೈನ ತಾನು ಮಾಡಿರದ ಕೆಲಸಗಳೇ ಇಲ್ಲಾ, ಅಷ್ಟು ಶ್ರಮ ಪಟ್ಟಿದ್ದೇನೆ. ಆ ಶ್ರಮವೇ ಈ ಯಶಸ್ಸಿಗೆ ಕಾರಣ. ಆ ಯಶಸ್ಸಿನ ಪ್ರತಿಫಲವೇ ಈ ಬಿಪಿ ಮಾತ್ರೆ ಎಂದು ಹಾಸ್ಯವಾಗಿ ಹೇಳುತ್ತಾರೆ ರಾಜೇಂದ್ರ ಶೆಟ್ಟಿ.
ಲೀಲಾವತಿ ಪ್ಯಾಲೇಸ್ ವಿಶೇಷವೆಂದರೆ ಗ್ರಾಹಕರ ಮನಸೆಳೆಯುವ ಚಿತ್ರಗಳು. ಹೊಟೇಲ್‌ನಲ್ಲಿ ಅಳವಡಿಸಲಾದ ಮಹಿಳೆ, ಮಾತೆ, ಯೋಧ, ಅನ್ನದಾತ ಸೇರಿದಂತೆ ದೇಶಪ್ರೇಮ ಸಾರುವ ಸುಂದರ ಚಿತ್ರಗಳು ಗ್ರಾಹಕರ ಊಟದ ರುಚಿಯನ್ನು ಇಮ್ಮಡಿ ಮಾಡುತ್ತದೆ.
ಬಾಲ್ಯದಲ್ಲಿ ತೊದಲುತ್ತೇನೆ ಎಂಬ ನ್ಯೂನ್ಯತೆಯಿಂದಾಗಿ ಶಾಲೆ ಬಿಟ್ಟ ಇವ್ರು, ಕಠಿಣ ಪರಿಶ್ರಮದ ಮೂಲಕ ಹೋಟೆಲ್ ಸಾಮ್ರಾಜ್ಯ ಕಟ್ಟಿ ಭಾವಿ ಉದ್ಯಮಿಗಳಿಗೆ ಮಾದರಿಯಾಗಿದ್ದಾರೆ.
Kshetra Samachara
05/10/2021 10:51 am