ಮಂಗಳೂರು: ಯಕ್ಷಗಾನ ಮೇಳದ ಮೊದಲ ವೃತ್ತಿಪರ ಮಹಿಳಾ ಭಾಗವತೆ ಎಂಬ ಹೆಗ್ಗಳಿಕೆ ಹೊಂದಿರುವ ಲೀಲಾವತಿ ಬೈಪಡಿಯತ್ತಾಯ ಅವರು ವಯೋಸಹಜ ಕಾಯಿಲೆಯಿಂದ ಶನಿವಾರ ರಾತ್ರಿ ಇಹಲೋಕ ತ್ಯಜಿಸಿದ್ದಾರೆ.
ಕಾಸರಗೋಡಿನ ಮುಳ್ಳೇರಿಯ 1947ರಲ್ಲಿ ಜನಿಸಿದ ಲೀಲಾವತಿ ಬೈಪಡಿಯತ್ತಾಯರು ಬಳಿಕ ಮಧೂರಿನಲ್ಲಿ ಬೆಳೆದರು. ಸಣ್ಣದಿರುವಾಗ ಲೀಲಾವತಿಯವರು ಪಿಟೀಲು ವಾದಕ ಪದ್ಮನಾಭ ಸರಳಾಯರಲ್ಲಿ ಶಾಸ್ತ್ರೀಯ ಸಂಗೀತ ಕಲಿತಿದ್ದರು. ತೆಂಕುತಿಟ್ಟಿನ ಪ್ರಖ್ಯಾತ ಚೆಂಡೆ-ಮದ್ದಳೆ ಕಲಾವಿದ ಹರಿನಾರಾಯಣ ಬೈಪಾಡಿತ್ತಾಯರನ್ನು ವಿವಾಹವಾದರು. ಸಂಗೀತದ ಜ್ಞಾನವಿದ್ದ ಲೀಲಾವತಿ ಬೈಪಾಡಿತ್ತಾರಿಗೆ ಪತಿ ಹರಿನಾರಾಯಣ ಬೈಪಾಡಿತ್ತಾಯರೇ ಭಾಗವತಿಕೆಯ ಗುರುಗಳಾದರು. ಸತತ ಅಭ್ಯಾಸ, ಪರಿಶ್ರಮದಿಂದ ಯಾವ ಪುರುಷ ಭಾಗವತರಿಗೂ ಕಡಿಮೆಯಿಲ್ಲದಂತೆ ಭಾಗವತೆಯಾಗಿ ರೂಪುಗೊಂಡರು.
1979ರಲ್ಲಿ ಭಾಗವತರಾಗಿ ಸುಬ್ರಹ್ಮಣ್ಯ ಮೇಳದಲ್ಲಿ ವೃತ್ತಿ ಜೀವನವನ್ನು ಆರಂಭಿಸಿದ ಲೀಲಾವತಿ ಬೈಪಡಿಯತ್ತಾಯರು ಪುತ್ತೂರು, ಅಳದಂಗಡಿ, ಕುಂಬಳೆ, ಬಪ್ಪನಾಡು, ತಲಕಳ ಮೇಳಗಳಲ್ಲಿ ತಿರುಗಾಟ ನಡೆಸಿದ್ದರು. ಅಲ್ಲದೆ ಸುಂಕದಕಟ್ಟೆ, ಕದ್ರಿ, ಸುರತ್ಕಲ್, ನಂದಾವರ ಮೇಳಗಳಲ್ಲಿ ಅತಿಥಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದರು. ಒಟ್ಟು 23ವರ್ಷಗಳ ಸುದೀರ್ಘ ಕಾಲ ಡೇರೆ-ಬಯಲಾಟ ಮೇಳಗಳಲ್ಲಿ ತಿರುಗಾಟ ಮಾಡಿದ್ದರು. ಅಲ್ಲದೆ 17ಕ್ಕೂ ಹೆಚ್ಚು ವರ್ಷಗಳಿಂದ ಅತಿಥಿ ಕಲಾವಿದರಾಗಿಯೂ ಯಕ್ಷಗಾನಕ್ಕೆ ಸೇವೆ ಸಲ್ಲಿಸಿದ್ದಾರೆ. ಹೆಣ್ಣುಮಕ್ಕಳಿಗೆ ಯಕ್ಷಗಾನ ನೋಡುವುದಕ್ಕೂ ಅವಕಾಶವಿಲ್ಲದ ಸಂಪ್ರದಾಯವಿದ್ದ ಕಾಲದಲ್ಲಿ ತೆಂಕು ತಿಟ್ಟಿನ ಅಗ್ರಮಾನ್ಯ ಭಾಗವತೆಯಾಗಿ ಅವರು ಬೆಳೆದದ್ದು ಇತಿಹಾಸವೇ ಸರಿ.
ಮೃತರು ಪತಿ ಹಿಮ್ಮೇಳ ವಾದಕ ಹರಿನಾರಾಯಣ ಬೈಪಡಿಯತ್ತಾಯ, ಪುತ್ರರಾದ ಪತ್ರಕರ್ತ ಅವಿನಾಶ್ ಬೈಪಡಿಯತ್ತಾಯ ಸೇರಿದಂತೆ ಇಬ್ಬರು ಪುತ್ರರು ಮತ್ತು ಅಪಾರ ಕಲಾಭಿಮಾನಿಗಳನ್ನು ಅಗಲಿದ್ದಾರೆ.
PublicNext
14/12/2024 10:02 pm