ಬ್ರಹ್ಮಾವರ: ಶಾಂತಿ ಸಹಬಾಳ್ವೆಯಲ್ಲಿ ಇದ್ದ ಬ್ರಹ್ಮಾವರ ಭಾಗದಲ್ಲಿ ಇದೀಗ ಕೆಲವು ದಿನಗಳಿಂದ ಕೋಮು ಸೌಹಾರ್ದತೆಗೆ ಧಕ್ಕೆ ಬರುತ್ತಿರುವ ಹೊಸ ಹೊಸ ಘಟನೆಗಳು ಸಂಭವಿಸುತ್ತಿದ್ದು ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ. ಇಂದು (ಶುಕ್ರವಾರ) ದೇವಸ್ಥಾನಗಳಿಗೆ ಹೋಗುವ ದಾರಿಯಲ್ಲಿ ಗೋಮಾಂಸ ಎಸೆದಿರುವ ದೃಶ್ಯ ಕಂಡು ಬಂದಿದೆ.
2 ದಿನದ ಹಿಂದೆ ಬ್ರಹ್ಮಾವರ ಹೊರವಲಯ ಬೈಕಾಡ್ತಿ ದೇವಸ್ಥಾನದ ಬಳಿ ಗೋವಿನ ರುಂಡ ಕಂಡು ಬಂದಿದ್ದು ಶುಕ್ರವಾರ ಬೈಕಾಡಿಯ ಕಾಮೇಶ್ವರ ದೇವಸ್ಥಾನದ ಮಾರ್ಗದಲ್ಲಿ ಗೋವಿನ ಕರುವಿನ ಶವ ಪತ್ತೆಯಾಗಿದ್ದು ತೀರಾ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಘಟನೆಯ ಸ್ಥಳಕ್ಕೆ ಬೆಳಿಗ್ಗೆ ಭಜರಂಗದಳ ಮತ್ತು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಜಮಾಯಿಸತೊಡಗಿದ ಬಳಿಕ ಬ್ರಹ್ಮಾವರ ಆರಕ್ಷಕ ಠಾಣಾಧಿಕಾರಿ ಸಿಬ್ಬಂದಿಯವರೊಂದಿಗೆ ಆಗಮಿಸಿದರು. ಪಶು ವೈದ್ಯಾಧಿಕಾರಿ ಡಾ, ಉದಯ ಕುಮಾರ್ ಶೆಟ್ಟಿ ಗೋವಿನ ಶವ ಪರಿಶೀಲನೆ ಮಾಡಿದರು. ಹಿಂದೂ ಪರ ಸಂಘಟನೆಯವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿ 2 ದಿನದಲ್ಲಿ ಆರೋಪಿಗಳನ್ನು ಪತ್ತೆ ಮಾಡುವಂತೆ ಮನವಿ ಮಾಡಿದರು. ಮತ್ತು ಇಂತಹ ಘಟನೆ ಮತ್ತೆ ಮರುಕಳಿಸಿದರೆ ಹಿಂದೂ ಪರ ಸಂಘಟನೆ ಉಗ್ರ ಪ್ರತಿಭಟನೆ ಮಾಡಲಿದೆ ಎಂದರು.
ಕೆಲವು ದಿನದ ಹಿಂದೆ ಬ್ರಹ್ಮಾವರ ಬಸ್ ನಿಲ್ದಾಣದ ದಕ್ಷಿಣ ಭಾಗದ ಇಂದಿರಾ ನಗರಕ್ಕೆ ಹೋಗುವಲ್ಲಿ ಹಿಂದೂ ಹಾಗೂ ಮುಸ್ಲಿಂ ಸಮುದಾಯದವರ ಕಾರು ಮತ್ತು ಬೈಕ್ ಸಂಚಾರದ ಸಮಯದಲ್ಲಿ ನಡೆದ ಚಿಕ್ಕ ಘಟನೆ ಕೆಲ ಹೊತ್ತು ಪೊಲೀಸ್ ಠಾಣೆ ಮುಂದೆ ಜನರು ಜಮಾಯಿಸಿ 4 ಮಂದಿಯನ್ನು ಬಂಧಿಸಿದ ಘಟನೆ ನಡೆದಿತ್ತು.
PublicNext
13/12/2024 10:01 pm