ಬಂಟ್ವಾಳ: ಹೆದ್ದಾರಿ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ಕಳೆಗಿಡಗಳು ಕಾಣಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಜಾಗದಲ್ಲಿ ತರಕಾರಿ ನಳನಳಿಸುತ್ತಿವೆ. ಇದು ಬಿ.ಸಿ.ರೋಡ್ ಪುಂಜಾಲಕಟ್ಟೆ ಹೆದ್ದಾರಿಯಲ್ಲಿ ಬಡಗುಂಡಿ ಎಂಬಲ್ಲಿ ಕಂಡುಬರುವ ದೃಶ್ಯ.
ಬಂಟ್ವಾಳ, ಮಣಿಹಳ್ಳ ದಾಟಿದ ನಂತರ ಬಡಗುಂಡಿ ಮತ್ತು ವಗ್ಗ ಮಧ್ಯ ಭಾಗದಲ್ಲಿ ಸಾಲು ಸಾಲು ತರಕಾರಿ ಸಸಿಗಳು ಗಮನ ಸೆಳೆಯುತ್ತದೆ. ಕೃಷಿಕರೊಬ್ಬರು ತರಕಾರಿ ಬೆಳೆಸಲು ಆಯ್ದುಕೊಂಡದ್ದು ಹೆದ್ದಾರಿ ರಸ್ತೆಯ ಬದಿ ಖಾಲಿ ಇರುವ ಪ್ರದೇಶ. ಬಡಗುಂಡಿ ನಿವಾಸಿ ರಾಮಣ್ಣ ಸಪಲ್ಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ತರಬೇತಿ ಪಡೆದು ಬೆಂಡೆ, ಅಲಸಂಡೆ, ಹೀರೆಕಾಯಿ, ತೊಂಡೆ, ಸೋರೆ, ಬೂದು ಕುಂಬಳ ತರಕಾರಿ ಕೃಷಿ ಮಾಡಿದ್ದಾರೆ.
ರಸ್ತೆ ಅಗಲೀಕರಣಕ್ಕೆ ತಮ್ಮ ಭೂಮಿಯನ್ನು ಕಳೆದುಕೊಂಡಿದ್ದರೂ ತರಕಾರಿ ಬೆಳೆಸುವ ಉತ್ಸಾಹ ನಿಲ್ಲಿಸದೆ ಹೆದ್ದಾರಿ ರಸ್ತೆಯ ಒಂದು ಬದಿಯಲ್ಲಿ ಸುಮಾರು ಎರಡು ಕಿಲೋ ಮೀಟರ್ ಉದ್ದದಲ್ಲಿ ತರಕಾರಿ ಬೆಳೆಸಿದ್ದಾರೆ. ರಸ್ತೆಯ ಬದಿಯಲ್ಲಿ ಸಾಲು ಸಾಲು ತರಕಾರಿಗಳಿಂದ ಪ್ರಾಣಿ ಪಕ್ಷಿಗಳಿಗೆ ತುಂಬಾ ಖುಷಿ. ಯಾಕೆಂದರೆ ಇಲ್ಲಿಂದ ನಿರಾಯಾಸವಾಗಿ ಮಂಗಗಳು, ನವಿಲುಗಳು ಇಲ್ಲಿ ಬೆಳೆದ ತರಕಾರಿಗಳನ್ನು ತಿಂದು ಹೋಗುತ್ತದೆ. ಆದರೆ ರಸ್ತೆ ಬದಿಯಲ್ಲಿ ಸಂಚರಿಸುವ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗಿಲ್ಲ. ತಾವು ಬೆಳೆಸಿದ ತರಕಾರಿಗಳನ್ನು ಸ್ವಂತಕ್ಕೂ ಮಾತ್ರವಲ್ಲದೆ ಹತ್ತಿರದ ಅಂಗನವಾಡಿ ಶಾಲೆ, ಪ್ರಾಥಮಿಕ ಶಾಲೆಯ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಹಾಗೂ ಅಕ್ಷರ ದಾಸೋಹಕ್ಕೆ ಕೊಡುಗೆಯಾಗಿ ನೀಡುತ್ತಿದ್ದಾರೆ.
Kshetra Samachara
15/09/2022 11:40 am