ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಳ್ಯ: ಮಳೆ ನಿಂತ ಬಳಿಕ ಪಟ ಪಟನೆ ಉದುರುತಿದೆ ಅಡಿಕೆ;ವ್ಯಾಪಕವಾಗಿದೆ ಅಡಿಕೆಗೆ ಕೊಳೆ ರೋಗ ಲಕ್ಷಣ!

ಸುಳ್ಯ:ಸುಮಾರು 20 ದಿನಗಳ ಕಾಲ ಬಿಡುವಿಲ್ಲದೆ ಸುರಿದ‌ ಮಳೆ ಅಲ್ಪ ಕಡಿಮೆಯಾಗಿ ಬಿಸಿಲು ಕಾಣಿಸುತ್ತಿದ್ದಂತೆ ಅಡಿಕೆ ತೋಟದಲ್ಲಿ ಕಾಯಿ ಅಡಿಕೆಗಳು ಪಟ ಪಟನೆ ಉದುರುತಿದೆ. ಕೊಳೆ ರೋಗದ ಲಕ್ಷಣವೂ ಕಂಡು ಬರುತಿದೆ ಎಂದು ಕೃಷಿಕರು ಹೇಳುತ್ತಿದ್ದಾರೆ. ಗಡಿ ಪ್ರದೇಶವಾದ ಕಲ್ಲಪಳ್ಳಿಯ ಕೃಷಿಕ ಹಾಗು ಪರಪ್ಪೆ ಬ್ಲಾಕ್ ಪಂಚಾಯತ್ ಸದಸ್ಯರಾದ ಆರ್.ಸಿ.ಅರುಣ್ ಕುಮಾರ್ ರಂಗತ್ತಮಲೆ ಅವರ ತೋಟದಲ್ಲಿ ವ್ಯಾಪಕವಾಗಿ ಅಡಿಕೆ ಉದುರಿ ಬೀಳುತ್ತಿದೆ. ಚಿಕ್ಕ ಮಿಡಿ ಅಡಿಕೆಗಳು, ಬೀಳುತ್ತದೆ

ಅರುಣ್ ರಂಗತ್ತಮಲೆ ಅವರ ತೋಟದಲ್ಲಿ ಉದುರಿ ಬಿದ್ದ ಅಡಿಕೆಗಳು ಹಸಿ ಅಡಿಕೆ, ಹಣ್ಣಾಗಲು ಸಿದ್ಧವಾಗಿರುವ ಅಡಿಕೆಗಳು ಈ ರೀತಿ ಬೀಳುತ್ತಿದೆ. ಕೆಲವು ಅಡಿಕೆ ಮರಗಳಲ್ಲಿ ಒಂದೆರಡು ಅಡಿಕೆಗಳು, ಕೆಲವು ಅಡಿಕೆ ತೋಟಗಳಲ್ಲಿ ವ್ಯಾಪಕವಾಗಿ ಅಡಿಕೆ ಬೀಳುತ್ತಿದೆ.

ಒಟ್ಟಿನಲ್ಲಿ ಅರ್ಧಕ್ಕಿಂತಲೂ ಹೆಚ್ಚು ತೋಟದಲ್ಲಿ ಅಡಿಕೆ ಬೀಳುತಿದೆ. ಕೊಳೆ ರೋಗದ‌ ಲಕ್ಷಣವೂ ಕಂಡು ಬರುತಿದೆ ಎಂದು ಅರುಣ್ ರಂಗತ್ತಮಲೆ ಮಾಹಿತಿ ನೀಡಿದ್ದಾರೆ. ಹಲವು ತೋಟಗಳಲ್ಲಿ ಅಡಿಕೆ ಉದುರುವುದು, ಕೊಳೆ ರೋಗದ ಲಕ್ಷಣ ಕಂಡು ಬರುತಿರುವ ಬಗ್ಗೆ ಕೃಷಿಕರು ಹೇಳುತ್ತಾರೆ. ತೋಟಕ್ಕೆ ಔಷಧಿ ಸಿಂಪಡಣೆ ಮಾಡಿದರೆ ಕೊಳೆ ರೋಗ ಬಾದೆ ಹರಡುವುದಕ್ಕೆ ಸ್ವಲ್ಪ ಮಟ್ಟಿನ ತಡೆ ಹಾಕಲು ಸಾಧ್ಯ ಎಂಬ ನಿರೀಕ್ಷೆ ಇದೆ ಎಂದು ಕೃಷಿಕರು ಹೇಳುತ್ತಾರೆ.

ಜುಲೈ ತಿಂಗಳ ಅರಂಭದಿಂದ ಸುಮಾರು 20 ದಿನಗಳ ಕಾಲ ನಿರಂತರ ಸುರಿದ ಭಾರೀ ಮಳೆಯಿಂದ ಹಳ್ಳ ಕೊಳ್ಳ, ಹೊಳೆ, ನದಿಗಳು ತುಂಬಿ ಹರಿದ ಕಾರಣ ಹಲವು ಅಡಿಕೆ ತೋಟಗಳಿಗೆ ನೀರು ನುಗ್ಗಿ ವಾರಗಟ್ಟಲೆ ತೋಟಗಳು ಜಲಾವೃತವಾಗಿತ್ತು. ಹೊಳೆ, ನದಿಗಳ ನೀರು ಇಳಿದರೂ ತೋಟಗಳಲ್ಲಿ ಒರತೆ, ನೀರು, ಕಣಿ ಪೂರ್ತಿ ನೀರು ತುಂಬಿ ತುಳುಕಿ ತೋಟ ಪೂರ್ತಿ ನೀರಲ್ಲಿತ್ತು.

ಈ ಅವಧಿಯಲ್ಲಿ ಸುಳ್ಯ ತಾಲೂಕಿನಲ್ಲಿ ಪ್ರತಿ ದಿನ ಸರಾಸರಿ 100-150 ಮಿ.ಮಿ. ಮಳೆ ಸುರಿದಿತ್ತು. 15 ದಿನಗಳಲ್ಲಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ 1500 ಮಿ.ಮಿ. ಗಿಂತಲೂ ಹೆಚ್ಚು ದಾಖಲೆಯ ಮಳೆಯಾಗಿತ್ತು. 2018ರಲ್ಲಿ ಈ ರೀತಿಯ ರಣ ಭೀಕರ‌ ಮಳೆ ನಿರಂತರ ಬಂದಿತ್ತು. ಆ ವರ್ಷ ಭಾರೀ ಪ್ರಮಾಣದಲ್ಲಿ ಕೊಳೆ ರೋಗ ಬಾದಿಸಿ ಕೃಷಿ ನಾಶ ಆಗಿತ್ತು ಎಂದು ಅಡಿಕೆ ಬೆಳೆಗಾರರು ನೆನಪಿಸುತ್ತಾರೆ.

ಇದೀಗ ಮಳೆ ಬಿಟ್ಟು ಅಲ್ಪ ಸ್ವಲ್ಒ ಬಿಡುವ ಸಿಗುವ ಸಂದರ್ಭದಲ್ಲಿ ಸಾಧ್ಯವಾದಷ್ಟು ಔಷಧಿ ಸಿಂಪಡಣೆ ಮಾಡಿದರೆ ರೋಗ ಬಾದೆ ಹರಡದಂತೆ ತಡೆಯಬಹುದು ಎಂಬುದು ಕೃಷಿಕರ ನಿರೀಕ್ಷೆ. ಮಳೆಗಾಲ ಆರಂಭಕ್ಕೆ ಮುನ್ನ ಅಡಿಕೆ ಬೆಳೆಗಾರರು ಒಂದು ಬಾರಿ ಔಷಧಿ ಸಿಂಪಡಣೆ ಮಾಡಿದ್ದರು. ಒಮ್ಮೆ ಔಷಧಿ ಸಿಂಪಡಣೆ ಮಾಡಿದರೆ ಒಂದು ಸಾವಿರ ಮಿಲಿ ಮೀಟರ್ ಮಳೆಯನ್ನು ರೋಗದಿಂದ ತಡೆಯುವ ಶಕ್ತಿ ಇರುತ್ತದೆ ಎಂಬುದು ಕೃಷಿಕರ ಲೆಕ್ಕಾಚಾರ. ಆದರೆ ಈಗ ಅದಕ್ಕಿಂತ ಹೆಚ್ಚು ಮಳೆ‌ ಸುರಿದಿರುವ ಕಾರಣ ಮತ್ತು ಅವಧಿ ಮುಗಿದಿದೆ.

ಮಳೆಗಾಲ ಆರಂಭಕ್ಕೆ ಮುನ್ನ ಹಲವು ಅಡಿಕೆ ತೋಟಗಳಲ್ಲಿ ನಳ್ಳಿ ಉದುರುವುದು ವ್ಯಾಪಕವಾಗಿ ಕಂಡು ಬಂದಿತ್ತು. ಇದರಿಂದ ಹಲವು ತೋಟಗಳಲ್ಲಿ ಭಾರೀ ಪ್ರಮಾಣದಲ್ಲಿ ಅಡಿಕೆ ನಷ್ಟ ಆಗಿತ್ತು. ಹವಾಮಾನ ವೈಪರೀತ್ಯ, ಉಷ್ಣಾಂಶದ ಏರುಪೇರು, ಫಂಗಸ್ ಬಾದೆ, ಕೀಟ ಬಾದೆಯಿಂದ‌ ಈ ರೀತಿ ನಳ್ಳಿ ಉದುರುತ್ತಿತ್ತು. ಕೆಲವೆಡೆ ಅದು ಮುಂದುವರಿದಿದ್ದು ಬೆಳೆದು ದೊಡ್ಡದಾದ ಅಡಿಕೆ ಕೂಡ ಈಗಲೂ ಬಿದ್ದು ಹೋಗುತ್ತದೆ ಎಂದು ಕೃಷಿಕರು ಹೇಳುತ್ತಾರೆ. ಕೆಲವೆಡೆ ತೋಟಗಳಲ್ಲಿ ನೀರು ನಿಂತ ಕಾರಣ ಬೇರುಗಳು ಕರಗಿ ಗಿಡಗಳು ಸಾಯುವುದು ಕಂಡು ಬರುತಿದೆ ಎಂದು ಕೃಷಿಕರು ಹೇಳುತ್ತಾರೆ. ಈ ರೀತಿ ಕಾಯಿ ಅಡಿಕೆ ಉದುರುವುದು ಹಳದಿ ರೋಗದ ಲಕ್ಷಣವೇ ಎಂಬ ಭಯವೂ ಇದೆ ಎಂದು ಕೆಲವು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.

Edited By :
Kshetra Samachara

Kshetra Samachara

26/07/2022 09:31 am

Cinque Terre

2.58 K

Cinque Terre

0

ಸಂಬಂಧಿತ ಸುದ್ದಿ