ಮಂಗಳೂರು: ಕರಾವಳಿಯಾದ್ಯಂತ ಸುರಿಯುತ್ತಿರುವ ಮಳೆಗೆ ಶಾಲೆಗೆ ರಜೆ ನೀಡಲಾಗಿದೆ. ಮನೆಯಲ್ಲಿ ಕುಳಿತ ಮಕ್ಕಳಲ್ಲಿ ಮೊಬೈಲ್ ನಲ್ಲಿ ಕಾಲ ಕಳೆಯುತ್ತಿರುವವರೇ ಅಧಿಕ ಮಂದಿ. ಆದರೆ ಇಲ್ಲೊಬ್ಬ ಆರನೇ ತರಗತಿಯ ಪೋರ ಗದ್ದೆಗಿಳಿದು ಕೃಷಿಯತ್ತ ಚಿತ್ತ ಹರಿಸಿದ್ದಾನೆ.
ಹೌದು... ಈ ರೀತಿ ಗದ್ದೆಗಿಳಿದು ಟ್ರಿಲ್ಲರ್ ನಲ್ಲಿ ಉಳುಮೆ ಮಾಡುತ್ತಿರುವ ಬಾಲಕನ ಹೆಸರು ವಿಖ್ಯಾತ್. ಈತ ಬೆಳ್ತಂಗಡಿಯ ನೆಲ್ಲಿಯಾರು ನಿವಾಸಿ ಕಿಶೋರ್ ಕುಮಾರ್ ಹಾಗೂ ಲತಾ ದಂಪತಿಯ ಪುತ್ರ. ಈತ ಪಟ್ಟೂರು ಶ್ರೀರಾಮ ಅನುದಾನಿತ ಹಿ.ಪ್ರಾ.ಶಾಲೆಯ ಆರನೇ ತರಗತಿಯ ವಿದ್ಯಾರ್ಥಿ. ವಿಖ್ಯಾತ್ ನದ್ದು ಕೃಷಿ ಕುಟುಂಬವಾಗಿದ್ದು, ಮಳೆಗಾಲ ಆರಂಭವಾದರೆ ಇವರ ಮನೆಯಲ್ಲಿ ಕೃಷಿ ಚಟುವಟಿಕೆಗಳು ಗದಿಗೆದರುತ್ತದೆ. ಅವಿಭಕ್ತ ಕುಟುಂಬವಾಗಿರುವ ಇವರ ಮನೆಯಲ್ಲಿ ಎಲ್ಲರೂ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಆದ್ದರಿಂದ ವಿಖ್ಯಾತ್ ಎಳವೆಯಲ್ಲಿಯೇ ಕೃಷಿಯತ್ತ ಆಕರ್ಷಿತರಾಗಿದ್ದಾರೆ.
ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯ ಹಿನ್ನಲೆಯಲ್ಲಿ ಜಿಲ್ಲಾಡಳಿತದಿಂದ ಶಾಲೆಗಳಿಗೆ ರಜೆ ನೀಡಲಾಗಿದೆ. ಅದರಲ್ಲೂ ಬೆಳ್ತಂಗಡಿ ಜಿಲ್ಲೆಯಲ್ಲಿ ಶಾಲೆಗೆ ಕಳೆದ ನಾಲ್ಕು ದಿನಗಳಿಂದ ರಜೆ ಘೋಷಣೆಯಾಗಿದೆ. ವಿಖ್ಯಾತ್ ಮಾತ್ರ ಈ ರಜೆಗಳನ್ನು ಕೃಷಿ ಕೆಲಸಕ್ಕಾಗಿ ವಿನಿಯೋಗಿಸಿದ್ದಾನೆ. ವಿಖ್ಯಾತ್ ಗದ್ದೆಯಲ್ಲಿ ಟಿಲ್ಲರ್ ಮೂಲಕ ಉಳುಮೆ ಮಾಡುತ್ತಾನೆ. ಈತ ಟಿಲ್ಲರ್ ನ ಎಲ್ಲಾ ತಾಂತ್ರಿಕ ಕೆಲಸದಲ್ಲೂ ಪರಿಣತಿಯನ್ನು ಹೊಂದಿದ್ದಾನೆ. ಕೃಷಿಯಿಂದ ಎಲ್ಲರೂ ವಿಮುಖರಾಗುತ್ತಿರುವ ಈ ಕಾಲದಲ್ಲಿ ಈ ಪುಟ್ಟ ಪೋರನ ಆಸಕ್ತಿಯನ್ನು ಖಂಡಿತಾ ಮೆಚ್ಚಲೇಬೇಕು.
Kshetra Samachara
06/07/2022 06:39 pm